ವಡ್ಡು ಗ್ರಾಮದ ಅನಧಿಕೃತ ಬಡಾವಣೆಯಲ್ಲಿ ಸರ್ಕಾರದ ಅಂಗನವಾಡಿ ಕಟ್ಟಡ ನಿರ್ಮಾಣ


(ಸಂಜೆವಾಣಿ ವಾರ್ತೆ)
ಬಳ್ಳಾರಿ:, ನ.19 ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದ ಅನಧಿಕೃತ ಬಡಾವಣೆಯಲ್ಲಿ ಸರ್ಕಾರ ಅಂಗನವಾಡಿ ಕಟ್ಟಡವನ್ನು ಅಕ್ರಮವಾಗಿ  ನಿರ್ಮಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗ್ರಾಮದ ಹಿರಿಯ ಪತ್ರಕರ್ತ ಚಂದ್ರಕಾಂತ್ ವಡ್ಡು. ಗ್ರಾಮಕ್ಕೆ ಸೇರಿದ ನರ್ವ ನಂ.262 (6 ಎಕರೆ 16 ಸಂಟ್ಸ್) ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಬಡಾವಣೆಯಲ್ಲಿ  ಅಂಗನವಾಡಿ ಕಟ್ಟಡವನ್ನು ಅಕ್ರಮವಾಗಿ ನಿರ್ಮಿಸಿದೆ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಪಂ ಸಿಈಓ ಅವರಿಗೆ ಪತ್ರ ಬರೆದಿದೆ
ಸಂಡೂರಿನ ಪಂಚಾಯತ ‘ರಾಜ್ ಇಂಜಿನಿಯರಿಂಗ್ ಉಪವಿಭಾಗ ಅಂದಾಜು ವೆಚ್ಚ ರೂ.20 ಲಕ್ಷದಲ್ಲಿ ನಿರ್ಮಾಣ ಮಾಡಿರುವ ಈ ಕಟ್ಟಡಕ್ಕೆ ಡಿ.ಎಂ.ಎಫ್. ಯೋಜನೆಯ ಅನುದಾನವನ್ನು ಬಳಸಲಾಗಿದೆ. ಕೃಷಿ ಜಮೀನನ್ನು ಕೃಷಿಯೇತರ ಬಳಕೆಗೆ ಭೂಪರಿವರ್ತನೆ ಮಾಡಿಸದೇ, ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರದಿಂದ ವಿನ್ಯಾಸ ಅನುಮೋದನೆ ಪಡೆಯದೇ ಅಕ್ರಮವಾಗಿ ನಿರ್ಮಿಸಿರುವ ಖಾಸಗಿ ಬಡಾವಣೆಯಲ್ಲಿ ಈ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ.
ಬಳ್ಳಾರಿ ಜಿಲ್ಲಾಧಿಕಾರಿಗಳು ಇದೇ ಜಮೀನಿನ ಅಕ್ರಮ ಬಡಾವಣೆ-ಕಟ್ಟಡದ ಬಗ್ಗೆ ಕರ್ನಾಟಕ ಭೂಕಂದಾಯ ಕಾನೂನು-1964 ಸೆಕ್ಷನ್ 96(1) ಪ್ರಕಾರ ಸಂಬಂಧಿಸಿದವರಿಗೆ ನೋಟೀಸ್ ಸಂಖ್ಯೆ ಆರ್.ಇ.ವಿ.ಎನ್.ಎ/144/2013- 14 ಜಾರಿ ಮಾಡಿದ್ದರು. ಇದಕ್ಕೂ ಮೊದಲು ಸಂಡೂರು ತಹಶೀಲ್ದಾರರು ದಿನಾಂಕ 05.01.2012ರಂದು ಪತ್ರ ನಂ ಕಂ/ಭೂ.ಪ/04/2011-12 ಮೂಲಕ ಸದ್ರಿ ವ್ಯಕ್ತಿಗಳ ವಿರುದ್ಧ ಕರ್ನಾಟಕ ಭೂಕಾಯ್ದೆ 1964 ಕಲಂ 95 ಮತ್ತು 96 ಪ್ರಕಾರ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸ್ಪಷ್ಟವಾಗಿ ಶಿಫಾರಸು ಮಾಡಿದ್ದರು. ಹಾಗೆಯೇ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ತೋರಣಗಲ್ಲು ಇವರು ಕೂಡ ಸಂಬಂಧಿಸಿದವರಿಗೆ ಸತತ ನೋಟೀಸ್ ಜಾರಿ ಮಾಡಿ ಅನಧಿಕೃತ ಬಡಾವಣೆ ಕಟ್ಟಡ ತೆರವುಗೊಳಿಸಲು ಸೂಚಿಸಿದ್ದಾರೆ.
ಈ ಬಗ್ಗೆ ಕರ್ನಾಟಕ ಹೈಕೋರ್ಟಿನ ಧಾರವಾಡ ಪೀಠದಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ (ಡಬ್ಲ್ಯು.ಪಿ. ನಂ. 107968/2014) ಕುರಿತಂತ  ನ್ಯಾಯಾಧೀಶರು ದಿನಾಂಕ 30,30,2015 ರಂದು ಆದೇಶ ಹೊರಡಿಸಿ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ.
ಅಲ್ಲದೇ ಈ ಕೃಷಿ ಜಮೀನಿನ ಮಾಲಿಕತ್ವ ಕುರಿತು ಹೈಕೋರ್ಟಿನ ಧಾರವಾಡ ಪೀಠದಲ್ಲಿ (ಆರ್.ಎಫ್.ಎ. 100181/2016) .ಹಾಗೂ ಹೊಸಪೇಟೆಯ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಕೋರ್ಟಿನಲ್ಲಿ (ಅರ್.ಎ.5031/2014) ವ್ಯಾಜ್ಯಗಳು ನಡೆಯುತ್ತಿವೆ.
ವಸ್ತುಸ್ಥಿತಿ ಹೀಗಿರುವಾಗ ಸರ್ಕಾರದ ಪಂಚಾಯತ್‌ ರಾಜ್ ಇಲಾಖೆಯು ಜಿಲ್ಲಾಧಿಕಾರಿಗಳು ಈ ಹಿಂದೆ ಹೊರಡಿಸಿದ ತೆರವು ಸೂಚನೆ ಮತ್ತು ಕೋರ್ಟ್‌ ಆದೇಶಗಳನ್ನು ನಿರ್ಲಕ್ಷಿಸಿ ಕಾನೂನು ಬಾಹಿರವಾಗಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ವಿಪರ್ಯಾಸಕರ.
ಖಾಸಗಿ ವ್ಯಕ್ತಿಗಳ ಅಕ್ರಮಗಳನ್ನು ತಡೆಗಟ್ಟಿ ಕಾನೂನು ಪಾಲನೆ ಮಾಡಬೇಕಾದ ಸರ್ಕಾರದ ಇಲಾಖೆಯೇ ತಾನೇ ಅಕ್ರಮ ಚಟುವಟಿಕೆಯಲ್ಲಿ ಭಾಗಿ ಮತ್ತು ಫಲಾನುಭವಿಯಾದ ವಿಚಿತ್ರ ನಿದರ್ಶನವಿದು.
ಈಗಲಾದರೂ ತಾವು ವಡ್ಡು ಗ್ರಾಮದ ನರ್ವೆ ನಂ.262 ರಲ್ಲಿ ಅಂಗನವಾಡಿ ಕಟ್ಟಡ ಒಳಗೊಂಡಂತೆ ಅನಧಿಕೃತ ಬಡಾವಣೆ ಕಟ್ಟಡ ನಿರ್ಮಾಣ ಹಗರಣದ ಆಮೂಲಾಗ್ರ ತನಿಖೆ ನಡೆಸಿ ತಪ್ಪಿತಸ್ಥ ಖಾಸಗಿ ವ್ಯಕ್ತಿಗಳು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಲು ಕೋರಿದ್ದಾರೆ.
ಹಾಗೆಯೇ ಅನಧಿಕೃತ ಬಡಾವಣೆ ಮತ್ತು ಕಟ್ಟಡಗಳನ್ನು ಕೂಡಲೇ ತೆರವು ಗೊಳಿಸಬೇಕು. ಅಕ್ರಮ ಎಸಗಿದವರ ಬಗ್ಗೆ ಮೃದು ಹಾಗೂ ವಿಳಂಬ ಧೋರಣೆ ಮುಂದುವರಿದರೆ ನ್ಯಾಯಾಲಯ ನಿಂದನೆ ಪ್ರಕರಣ ಸೇರಿದಂತೆ ಸೂಕ್ತ ನಿರ್ದೇಶನಕ್ಕಾಗಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ ಎಂದಿದ್ದಾರೆ.