ವಡ್ಡರ ಬಂಡೆ ರಸ್ತೆ ದುರಸ್ತಿ ಮಾಡಿ ಜೋಗಸೆಟ್ ನಗರಕ್ಕೆ ನೀರು ಕೊಡಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.09: ನಗರದ ವಡ್ಡರ ಬಂಡೆಯ ರಸ್ತೆಯನ್ನು ದುರಸ್ಥಿ ಮಾಡಿ, ಜೋಗಸೆಟ್ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಿ ಎಂದು ಎಸ್‍ಯುಸಿಐ ಪಕ್ಷದ ಮುಖಂಡರು ಸ್ಥಳೀಯ ನಿವಾಸಿಗಳೊಂದಿಗೆ ಪಾಲಿಕೆ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿ ಪಾಲಿಕೆಯ ಅಧಿಕಾರಿಗಳಿಗೆ ಮನವಿ ಮಾಡಿದರು.
ನಗರದ ವಡ್ಡರ ಬಂಡೆಯ ಮುಖ್ಯ ರಸ್ತೆ ಹಾಗೂ ಒಳ ರಸ್ತೆಗಳು ಹಾಳಾಗಿದ್ದು, ಜನರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಇದರಿಂದಾಗಿ ಇಲ್ಲಿನ ಜನಗಳು, ಮಕ್ಕಳು, ವೃದ್ಧರು ಬಿದ್ದು ಗಾಯಗೊಂಡಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ಒತ್ತಾಯಿಸಿ ಸಾಕಷ್ಟು ಪ್ರತಿಭಟನೆ ನಡೆಸಲಾಗಿದೆ. ಮಹಾನಗರಪಾಲಿಕೆಯು ಮುಖ್ಯ ರಸ್ತೆಯನ್ನು ದುರಸ್ತಿಗೊಳಿಸುವುದಾಗಿ ಭರವಸೆ ನೀಡಿ ಒಂದು ವರ್ಷ ಕಳೆದುಹೋಗಿದೆ.
ಅಧಿಕಾರಿಗಳು ಕೇವಲ ಬಡಾವಣೆ ಪರಿಶೀಲನೆಗಷ್ಟೆ ತಮ್ಮ ಕೆಲಸವನ್ನು ಸೀಮಿತಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಹಾನಗರಪಾಲಿಕೆಯು ವಡ್ಡರಬಂಡೆಯ ಮುಖ್ಯರಸ್ತೆಯನ್ನು ತುರ್ತಾಗಿ ದುರಸ್ತಿಗೊಳಿಸುವ ಕ್ರಮ ಕೈಗೊಳ್ಳಬೇಕೆಂದು  ಬಳ್ಳಾರಿಯ ಹರಿಶ್ಚಂದ್ರ ಘಾಟ್ ಬಳಿ ಇರುವ ಜೋಗಸೆಟ್ ನಗರದಲ್ಲಿ ಕಳೆದ ಹತ್ತು ವರ್ಷಗಳಿಂದ ಕುಡಿಯುವ ನೀರಿನ ಸೌಲಭ್ಯವಿಲ್ಲದ ಕಾರಣ ಅಲ್ಲಿನ ಜನರು ಪರದಾಡುವಂತಾಗಿದೆ. ಸಮರ್ಪಕ ಕುಡಿಯುವ ನೀರು ಒದಗಿಸಲು ಮಹಾನಗರಪಾಲಿಕೆಗೆ ಮನವಿ ಮಾಡಿಕೊಂಡಿದೆ. ಇದರಿಂದಾಗಿ ಮಹಾನಗರಪಾಲಿಕೆಯು ಟ್ಯಾಂಕರ್ ಮೂಲಕ 20 ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ. ಇದು ಯಾವುದಕ್ಕೂ ಸಾಕಾಗುತ್ತಿಲ್ಲ. ಹಾಗಾಗಿ ಅಲ್ಲಿನ ಜನರ ನೀರಿಗಾಗಿನ ಹಾಹಾಕಾರ ನಿಂತಿಲ್ಲ. ಅಷ್ಟೇ ಅಲ್ಲದೆ 20 ದಿನದವರೆಗೂ ನೀರು ಶೇಖರಣೆ ಮಾಡುವುದರಿಂದ ಶೇಖರಿಸಿದ ನೀರಲ್ಲಿ ಹುಳಗಳು ಬಿದ್ದು, ಸಾಕಷ್ಟು ಜನರು ಕಾಯಿಲೆಗೆ ಈಡಾಗಿದ್ದಾರೆ. ಆದ್ದರಿಂದ  ಜೋಗಸೆಟ್ ನಗರಕ್ಕೆ ಕುಡಿಯುವ ನೀರಿನ ಪೈಪ್ ಲೈನ್ ತರುವುದರ ಮೂಲಕ ಅಲ್ಲಿನ ಜನರಿಗೆ ಸಮರ್ಪಕವಾದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು  ಒದಗಿಸಬೇಕೆಂದು ಎಸ್‍ಯುಸಿಐನಿಂದ ಪಾಲಿಕೆಗೆ ಇಂದು  ಮನವಿ ಸಲ್ಲಿಸಲಾಗಿದೆ