ವಡಗೇರಿ ತಾಲ್ಲೂಕಿನಲ್ಲಿ ಕಂದಾಯ ಅಧಿಕಾರಿಗಳಿಂದಲೇ ರೈತರ ಪರಿಹಾರದ ಹಣ ವಸೂಲಿ ಕ್ರಮಕ್ಕೆ ಭೀಮುನಾಯಕ ಆಗ್ರಹ

ಯಾದಗಿರಿ:ನ.20: ಜಿಲ್ಲೆಯ ವಡಗೇರಿ ತಾಲ್ಲೂಕಿನಲ್ಲಿ ಬೆಳೆ ಪರಿಹಾರದ ಹಣದಲ್ಲಿ ಕಂದಾಯ ಅಧಿಕಾರಿಗಳು ರಾಜಾರೋಷವಾಗಿ ರೈತರಿಂದ ಹಣ ವಸೂಲಿಗಿಳಿದಿದ್ದು ಕೋಟ್ಯಂತರ ರೂ. ಗಳ ಪರಿಹಾರದ ಹಣ ಜೇಬಿಗಿಳಿಸಿದ ಕಂದಾಯ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರನ್ನು ಜೈಲಿಗೆ ಕಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ನೀಡಿದರೆ ಅದಕ್ಕೂ ಕನ್ನ ಹಾಕಿರುವ ಕಂದಾಯ ಅಧಿಕಾರಿಗಳು ಭಾರಿ ಪ್ರಮಾಣದ ಹಣವನ್ನು ಜೇಬಿಗಿಳಿಸಿದ್ದಾರೆ ಎಂದು ರೈತರೇ ಅಳಲು ತೋಡಿಕೊಳ್ಳುತ್ತಿದ್ದಾರೆ. ಮತ್ತು ನೇರವಾಗಿ ಕಂದಾಯ ಅಧಿಕಾರಿಗಳ ಹೆಸರು ಹೇಳಿ ದೂರುತ್ತಿದ್ದಾರೆ.

ದೇವರು ವರ ಕೊಟ್ಟರೆ ಪೂಜಾರಿ ವರ ಕಸಿದುಕೊಂಡ ಎಂಬಂತೆ ವಡಗೇರಿ ತಾಲ್ಲೂಕಿನಲ್ಲಿ ಆಗಿದ್ದು, ತಕ್ಷಣ ಜಿಲ್ಲಾಡಳಿತ ಇಂತಹ ಅಧಿಕಾರಿಗಳ ವಿರುದ್ಧ ಮಿಂಚಿನ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ರೈತರು ರಕ್ಷಣಾ ವೇದಿಕೆಗೆ ಮೊರೆ ಇಟ್ಟಿದ್ದು ತಕ್ಷಣ ಸರ್ಕಾರ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕೆಂದು ಅವರು ಆಗ್ರಹಿಸಿದರು.

ಸರ್ಕಾರದಿಂದ ಹಣವನ್ನು ಡಿಬಿಟಿ ಮಾಡಿದ್ದರೂ ಸಹ ಹಣ ವರ್ಗಾವಣೆಯಾದ ನಂತರ ರೈತರಿಂದ ಹಣ ವಸೂಲಿ ಮಾಡುತ್ತಿರುವ ಘಟನೆ ತಲೆ ತಗ್ಗಿಸುವಂತಹ ಸಂಗತಿಯಾಗಿದ್ದು, ಜಿಲ್ಲಾ ಮಂತ್ರಿಗಳು, ಶಾಸಕರು, ಜಿಲ್ಲಾಧಿಕಾರಿಗಳು ಈ ಬಗ್ಗೆ ಸಮಗ್ರ ತನಿಖೆ ಗೆ ಮುಂದಾಗಬೇಕು ಇಲ್ಲದಿದ್ದರೆ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ವಿಶ್ವಾರಾಧ್ಯ ದಿಮ್ಮೆ, ಸಾಹೇಬಗೌಡ ನಾಯಕ, ಸಾಬು ಹೋರುಂಚಿ ಎಚ್ಚರಿಕೆ ನೀಡಿದ್ದಾರೆ.