ವಡಗೂರು ಸೊಸೈಟಿ ಲೋಪ ಸರಿಪಡಿಸಲು ತಾಕೀತು

ಕೋಲಾರ,ಏ.೩:ವಡಗೂರು ಸೊಸೈಟಿಯಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಿಕೊಳ್ಳಿ, ಏ.೧೦ ರೊಳಗೆ ಉಳಿಸಿಕೊಂಡಿರುವ ಎರಡು ವರ್ಷಗಳ ಆಡಿಟ್ ಮುಗಿಸಿ ಮಹಿಳೆಯರಿಗೆ ಸಾಲ ನೀಡಿ ಮರ್ಯಾದೆ ಉಳಿಸಿಕೊಳ್ಳಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲವನ್ನೂ ನೀಡದೇ, ಇಟ್ಟಿರುವ ಠೇವಣಿ ವಾಪಸ್ಸು ನೀಡದೇ ವಂಚಿಸಲಾಗಿದೆ ಎಂಬ ಮಹಿಳೆಯರ ಆರೋಪದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಡಗೂರು ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಕಚೇರಿಗೆ ಶುಕ್ರವಾರ ಬ್ಯಾಂಕಿನ ನಿರ್ದೇಶಕರೊಂದಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಮಾತನಾಡುತ್ತಿದ್ದರು.
೨೦೧೪ಕ್ಕೆ ಮೊದಲು ನಡೆದಿರುವ ಲೋಪಗಳನ್ನು ಈವರೆಗೂ ಯಾರೂ ಸರಿಪಡಿಸಿಲ್ಲ ಎಂದು ಸೊಸೈಟಿ ಅಧ್ಯಕ್ಷರು ಹೇಳುತ್ತಾರೆ, ಸ್ವಂತ ಬಂಡವಾಳದಲ್ಲಿ ಸಾಲ ನೀಡಿರುವುದಕ್ಕೆ ಸೂಕ್ತ ದಾಖಲೆಗಳನ್ನು ನಿರ್ವಹಿಸಿಲ್ಲ, ಅವಿಭಜಿತ ಜಿಲ್ಲೆಯ ೨೦೦ ಸೊಸೈಟಿಗಳ ಪೈಕಿ ಆಡಿಟ್ ಆಗದ ಸೊಸೈಟಿ ಇದೊಂದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸೊಸೈಟಿಯಲ್ಲಿ ಈವರೆಗೂ ಆಗಿರುವ ಲೋಪಗಳು ಆಡಿಟ್ ವರದಿಯಲ್ಲಿ ತೋರಿಸಿ, ಅದರಂತೆ ಯಾರ್ಯಾರ ಬಳಿ ಸೊಸೈಟಿ ಹಣ ಸೇರಿದೆಯೋ ಅದೆಲ್ಲವನ್ನು ಕಟ್ಟಿಸಿ, ಇಲ್ಲವಾದರೆ ಕ್ರಿಮಿನಲ್ ಕೇಸ್ ದಾಖಲಿಸಲು ಕ್ರಮವಹಿಸಿ ಎಂದು ಸಲಹೆ ನೀಡಿದರು.
ಆಹಾರ ಮಾರಾಟಗಾರರು ೭,೮೦,೦೦೦ ರೂ, ಹಾಗೂ ರೈತರು ೮,೮೫,೦೦೦ ರೂ ಬಾಕಿ ಉಳಿಸಿಕೊಂಡಿರುವುದು ಬಾಕಿ ಉಳಿಸಿಕೊಂಡಿದ್ದಾರೆ. ಇದನ್ನು ಕಾಲಮಿತಿಯೊಳಗೆ ವಸೂಲಿ ಮಾಡಬೇಕು. ಸಿಬ್ಬಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸೋಸೈಟಿಯ ಆಡಳಿತ ಮಂಡಳಿ ಸಭೆಯಲ್ಲಿ ತಿರ್ಮಾನಕೈಗೊಳ್ಳಬೇಕು ಎಂದು ಸೂಚಿಸಿದರು.
ಕ್ಯಾಶ್ ಬುಕ್, ಆಹಾರ ಮಾರಾಟ ಪುಸ್ತಕ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿ ಹಾಗೂ ರೈತರಿಗೆ ಸಾಲ ವಿತರಿಸುವ ಬಗ್ಗೆ ಹಾಗೂ ಸಾಲ ಮರುಪಾವತಿ ಪರಿಶೀಲಿಸಿ, ಮಹಿಳಾ ಸಂಘಗಳ ಆರೋಪಕ್ಕೆ ಗುರಿಯಾಗಿರುವ ಸಿಇಒ ವಿಜಯ್ ಕುಮಾರ್ ಕಡೆಯಿಂದ ಮಾಹಿತಿ ಪಡೆದುಕೊಂಡರು.
ಸೋಸೈಟಿಯಲ್ಲಿ ಆಗಿರುವ ವ್ಯತ್ಯಾಗಳಿಂದ ಮಹಿಳೆಯರಿಗೆ, ರೈತರಿಗೆ ಸಾಲ ವಿತರಿಸಲಾಗುತ್ತಿಲ್ಲ. ಇತ್ತೀಚಿಗೆ ಮಹಿಳೆಯರು ಸೋಸೈಟಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿ ಗಡುವು ನೀಡಿದ್ದರು. ಜೊತೆಗೆ ಹೆದ್ದಾರಿ ಬಂದ್ ಮಾಡಲು ತೀರ್ಮಾನಿಸಿದ್ದರು. ಅವರಿಗೆ ನಾವು ಭರವಸೆ ನೀಡಿ ಧರಣಿ ಕೈಬಿಡುವಂತೆ ಮಾಡಿದ್ದೇವೆ, ನೀವು ಮಾಡಿರುವ ತಪ್ಪಿಗೆ ನಾವು ಉತ್ತರ ಕೊಡಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಅನೇಕ ಹಿರಿಯ ಸಹಕಾರಿಗಳು ಬಾಳಿ ಬೆಳೆದ ವ್ಯಾಪ್ತಿ ಈ ಸೊಸೈಟಿಗಿದೆ, ಇಂತಹ ಸೊಸೈಟಿ ಇಡೀ ಎರಡು ಜಿಲ್ಲೆಗೆ ಮಾದರಿಯಾಗಬೇಕಾಗಿತ್ತು ಆದರೆ ನೀವೇನು ಮಾಡಿದ್ದೀರಿ, ಎರಡೂ ಜಿಲ್ಲೆಗಳ ಮುಂದೆ ತಲೆ ತಗ್ಗಿಸುವ ಕೆಲಸ ಮಾಡಿದ್ದೀರಿ, ಇದನ್ನು ಸರಿಪಡಿಸಿಕೊಳ್ಳಿ ಎಂದರು.
ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಸಿಇಒ ವಿಜಯಕುಮಾರ್ರನ್ನು ತರಾಟೆಗೆ ತೆಗೆದುಕೊಂಡು ಸರಿಯಾಗಿ ಕೆಲಸ ಮಾಡುವುದನ್ನು ಕಲಿಯಿರಿ, ಇದು ಬಡವರು,ಮಹಿಳೆಯರ ಆರ್ಥಿಕ ಸದೃಢತೆಗೆ ಇರುವ ಜನರ ಸೊಸೈಟಿ ಯಾರೊಬ್ಬರ ಸ್ವತ್ತಲ್ಲ, ನೀವು ಬದಲಾಗಿ, ಇಲ್ಲದಿದ್ದರೆ ಜನ ಬುದ್ದಿ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ವಡಗೂರು ಸೋಸೈಟಿ ಉಪಾಧ್ಯಕ್ಷ ಅಂಬರೀಶ್, ನಿರ್ದೇಶಕರಾದ ಸಿ.ವಿ.ನಾರಾಯಣಸ್ವಾಮಿ, ರಮೇಶ್, ಸಿಇಒ ವಿಜಯ್ ಕುಮಾರ್ ಹಾಗೂ ಆಹಾರ ಮಾರಾಟಗಾರರು, ಸಿಬ್ಬಂದಿ ಹಾಜರಿದ್ದರು.