ವಜ್ರಮಹೋತ್ಸವ, ಸಾಮೂಹಿಕ ಇಷ್ಟಲಿಂಗ ಪೂಜೆ

ವಿಜಯಪುರ.ಮೇ೨೭: ಪ್ರಪಂಚದ ೨೦೦ ಕ್ಕೂ ಹೆಚ್ಚು ದೇಶಗಳಲ್ಲಿ ೭೦೦ ಕೋಟಿಗೂ ಹೆಚ್ಚು ಜನಸಂಖ್ಯೆಯಲ್ಲಿ ಒಬ್ಬರನ್ನು ಮತ್ತೊಬ್ಬರು ಹೊಲದಂತೆ ಸೃಷ್ಟಿ ಮಾಡಿರುವ ಪರಮಾತ್ಮ ಮಹಾನ್ ಕಲಾಕಾರನೆಂದು ಶ್ರೀಮದ್ ವಿಭೂತಿಪುರ ಮಹಾಸಂಸ್ಥಾನ ಮಠಾಧೀಶ ಡಾ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.
ಅವರು ಪಟ್ಟಣದ ಶ್ರೀ ನಗರೇಶ್ವರಸ್ವಾಮಿ ದೇವಾಲಯದ ಪ್ರಾರ್ಥನಾಮಂದಿರದಲ್ಲಿ ಶ್ರೀ ವೀರಭದ್ರಸ್ವಾಮಿ ಗೋಷ್ಟಿ ಅಕ್ಕನಬಳಗ ಸೇವಾಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ, ಮಾಸಿಕ ಶಿವಾನುಭವಗೋಷ್ಟಿ, ವಜ್ರಮಹೋತ್ಸವ, ನೂತನ ಪದಾಧಿಕಾರಿಗಳ ಪದವಿಸ್ವೀಕಾರ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.
ಅನ್ನತೊಂದಗುಳ (ಅನ್ನದಲ್ಲಿ ಒಂದು ಅಗು) ವಸ್ತ್ರದಲ್ಲಿ ಒಂದು ಎಳೆಯ ನಾಳೆಗೆ ಬೇಕು ಎಂಬ ಆಶಯದಲ್ಲಿ ಇಲ್ಲದವನೇ ನಿಜವಾದ ಶರಣ ಎಂಬ ವಚನ ಅಂದಿನ ಕಾಲದಲ್ಲಿತ್ತು.
ಅಂತಹ ಶರಣರಂತೆ ಜೀವನ ನಡೆಸುವುದು ಕಷ್ಟ, ಆದರೆ ಶರಣರ ತತ್ವಾದರ್ಶಗಳನ್ನು ಅನುಸರಿಸಿ ಬದುಕಬಹುದು. ೧೨ ನೇ ಶತಮನಾದಲ್ಲಿ ಶರಣರು ಬದುಕಿದ ರೀತಿಯಲ್ಲಿ ಇಂದು ಬದುಕುವುದು ಕಷ್ಟ. ಆಗಿನ ಕಾಲಕ್ಕೆ ಕೋಟಿಗೊಬ್ಬ ಶರಣ ಎಂಬ ಮಾತಿತ್ತು ಎಂದರು.
೨೨ ವರ್ಷಗಳ ಕಾಲ ಸುಧೀರ್ಘ ಅಧ್ಯಕರಾಗಿದ್ದ ನಿರ್ಗಮಿತ ಅಧ್ಯಕ್ಷ ಸಿ.ಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೂತನ ಅಧ್ಯಕ್ಷ ವಿ.ಅನಿಲ್‌ಕುಮಾರ್, ಗೌರವಾಧ್ಯಕ್ಷ ಪಿ.ಚಂದ್ರಪ್ಪ, ಉಪಾಧ್ಯಕ್ಷೆ ಅಂಬಾಭವಾನಿ ಬಸವರಸಪ್ಪ, ನಿರ್ದೇಶಕಿ ಮೀನಾ, ವಿಮಲಾಂಬಾ, ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಎಂ.ಎಸ್.ಕೃಷ್ಣಮೂರ್ತಿ, ಖಜಾಂಚಿ ಎಂ.ಶಂಕರ್, ಬೆಂಗಳುರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿದರು. ಟ್ರಸ್ಟ್‌ನ ಕಾರ್ಯದರ್ಶಿ ಮ.ಸುರೇಶ್‌ಬಾಬು ಅವರು ಸಂಘವು ನಡೆದ ಬಂದು ಹಾದಿಯ ಬಗ್ಗೆ ವಿವರಿಸಿದರು. ಎಎಸ್‌ವಿ ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಅಂಬಿಕಾ ಚಂದ್ರಶೇಖರ್, ನಿವೃತ್ತ ಪೌರಾಯುಕ್ತ ವಿ.ಶಿವಕುಮಾರ್,ವಿದ್ಯಾವರ್ಧಕಸಂಘದ ನಿರ್ದೇಶಕರಾದ ಸುವರ್ಣಶಿವಕುಮಾರ್, ಜಯಕುಮಾರ್, ಭಾರತಿ ಪ್ರಭುದೇವ್, ವಿ.ರವೀಂದ್ರ, ಟ್ರಸ್ಟ್‌ನ ಖಜಾಂಚಿ ಎಂ.ಶಿವಪ್ರಸಾದ್, ಸಹಕಾರ್ಯದರ್ಶಿ ಸುಮಂತ್‌ಕುಮಾರ್, ನಿರ್ದೇಶಕರುಗಳಾದ ಮನೋಹರ್, ರಾಧಾ, ಎಸ್.ಪಿ.ಕೃಷ್ಣಾನಂದ್, ರಾಧಾಚಂದ್ರಪ್ಪ, ಶೀಲಾರಾಣಿಸುರೇಶ್, ಚಂದ್ರಕಲಾರುದ್ರಮೂರ್ತಿ, ಭಾರತಿಶಿವಪ್ರಸಾದ್, ಪಾರ್ವತಮ್ಮಮುನಿಯಪ್ಪ, ಮಾಲತಿ ಆನಂದ್‌ಕುಮಾರ್, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪುಸ್ತಕ ಬಿಡುಗಡೆ: ವಜ್ರಮಹೋತ್ಸವದ ಅಂಗವಾಗಿ ಭಕ್ತಿಗೀತೆಗಳು, ವಚನಗಳನ್ನೊಳಗೊಂಡ ಭಕ್ತಿನೀರಾಜನ ನೆನಪಿನ ಸಂಚಿಕೆ ಬಿಡುಗಡೆ ಮಾಡಲಾಯಿತು. ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಅವರು ಕೃತಿ ಕುರಿತು ಮಾತನಾಡಿ, ಯುವಪೀಳಿಗೆಗೆ ಸಂಗ್ರಹಯೋಗ್ಯವಾಗಿದ್ದು, ಇದರಲ್ಲಿನ ವಚನಗಳನ್ನು ಹಾಡಲುಬಹುದಾಗಿದೆ. ಸಂಘದ ಕಾರ್ಯಚಟುವಟಿಕೆ, ನಡೆದುಬಂದ ಹಾದಿಯನ್ನು ಸವಿವರವಾಗಿ ಪ್ರಕಟಿಸಲಾಗಿದೆ ಎಂದರು. ಸಾಮೂಹಿಕ ಇಷ್ಟಲಿಂಗಪೂಜೆ: ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಇಷ್ಟಲಿಂಗಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ.ಶ್ರೀ ಮಹಾಂತಲಿಂಗಸ್ವಾಮೀಜಿ ಅವರು ಇಷ್ಟಲಿಂಗಪೂಜೆ ವಿಧಿವಿಧಾನಗಳ ಬಗ್ಗೆ ತಿಳಿಸಿಕೊಟ್ಟರು. ಅಪಾರ ಮಂದು ಸಾಮೂಹಿಕ ಲಿಂಗಪೂಜೆಯಲ್ಲಿ ಪಾಲ್ಗೊಂಡರು.
ಸೇವಾಕರ್ತರಿಗೆ ಸನ್ಮಾನ: ಶ್ರೀ ವೀರಭದ್ರಸ್ವಾಮಿಗೋಷ್ಟಿ ಅಕ್ಕನಬಳಗದ ವತಿಯಿಂದ ನಡೆಯುವ ಮಾಸಿಕ ಶಿವಾನುಭವಗೋಷ್ಟಿ, ತಿಂಗಳಬೆಳಕು ಮತ್ತಿತರ ಕಾರ್ಯಕ್ರಮಗಳಿಗೆ ಕಳೆದ ೬೫ ವರ್ಷಗಳಿಂದ ಪ್ರಾಯೋಜನೆ ನೀಡುತ್ತಿರುವ ಸೇವಾಕರ್ತರನ್ನು ಸನ್ಮಾನಿಸಲಾಯಿತು. ಅಮೇರಿಕಾ ನಿವಾಸಿ ಗ್ರೀಷ್ಮಾ ಅಶೋಕ್ ಮತ್ತು ಆದ್ಯ ಅಶೋಕ್ ಅವರಿಂದ ನಡೆದ ಭರತನಾಟ್ಯಪ್ರದರ್ಶನ ಎಲ್ಲರ ಗಮನಸೆಳೆಯಿತು.
ಮೆರವಣಿಗೆ: ಶ್ರೀ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮೇಲೂರು ರಸ್ತೆಯ ಅರಿವಿನ ಮನೆಯಿಂದ ಮಾರ್ಕೆಟ್, ನವಗ್ರಹದೇವಾಲಯ ರಸ್ತೆ, ಗಾಂಧಿಚೌಕದ ಮೂಲಕ ಕುಂಭಕಳಸ, ವೀರಗಾಸೆಯೊಂದಿಗೆ ಪ್ರಾರ್ಥನಾಮಂದಿರಕ್ಕೆ ಕರೆದೊಯ್ಯಲಾಯಿತು.