ವಜಾಗೊಂಡ ಪೌರಕಾರ್ಮಿಕರ ಧರಣಿ 3 ನೇ ದಿನಕ್ಕೆ

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.12: ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿರುವ ನಗರ ಸ್ಥಳೀಯ ಸಂಸ್ಥೆಗಳ ವಿವಿಧ ಶಾಖೆಗಳಲ್ಲಿ  ದುಡಿಯುತ್ತಿದ್ದ 286 ಕಾರ್ಮಿಕರನ್ನು ತಾತ್ಕಾಲಿಕವಾಗಿ ವಜಾ ಮಾಡಿದ್ದು. ಅವರನ್ನು ಮರು ನೇಮಕ ಮಾಡಿಕೊಳ್ಳಲು ಒತ್ತಾಯಿಸಿ ಕಾರ್ಮಿಕರು ತಮ್ಮ ಕುಟುಂಬ ಸದಸ್ಯರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹವು ಇಂದಿಗೆ 3ನೇ ದಿನಕ್ಕೆ ಕಾಲಿಟ್ಟಿದೆ.
ಇಂದಿನ ಧರಣಿ ಸತ್ಯಾಗ್ರಹದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸತ್ಯಬಾಬು, ಜಾವೀದ್, ನಾಗರಾಜ ತೆಕ್ಕಲಕೋಟೆ, ಪಿ.ಬಸವರಾಜ, ಸುಧೀಂದ್ರ, ಕೆ.ಹುಲಿಗೆಪ್ಪ, ಇಂತಿಯಾಜ್, ಮೆಹಬೂಬ್‍ಭಾಷ ಸೇರಿದಂತೆ ಮುಂತಾದವರು ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಸಿರುಗುಪ್ಪ, ಕಂಪ್ಲಿ, ಸಂಡೂರು, ಕುರೇಕುಪ್ಪೆ, ತೆಕ್ಕಲಕೋಟೆ, ಕುಡತಿನಿ, ಕಮಲಾಪುರ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ ನಗರ ಸ್ಥಳೀಯ ಪುರಸಭೆ ಮತ್ತಿತರ ಸಂಸ್ಥೆಗಳು ಸೇರಿದಂತೆ ವಿವಿಧ ಶಾಖೆಗಳಲ್ಲಿ ಕಳೆದ 20 ವರ್ಷಗಳಿಂದ ದುಡಿಯುತ್ತಿದ್ದ ಕಾರ್ಮಿಕರನ್ನು ( ಎಫ್.ಬಿ.ಎ.ಎಸ್. ) ತಂತ್ರಾಂಶದಲ್ಲಿ ಅಳವಡಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣ ಹೇಳಿ 286 ಕಾರ್ಮಿಕರನ್ನು ನ 30 ರಿಂದ  ತಾತ್ಕಾಲಿಕವಾಗಿ ಕೆಲಸದಿಂದ ವಜಾ ಮಾಡಲಾಗಿದೆ. ಇವರನ್ನು  ಇವರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಸರ್ಕಾರದ ಕ್ರಮಾನುಸಾರವಾಗಿ ನಿಯಮಗಳನ್ನು ಪಾಲಿಸದೇ ಇರುವುದನ್ನು ಕಂಡರೆ ಆ ಸಂದರ್ಭದಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನವೇ ಎದ್ದು ಕಾಣುತ್ತಿದೆ. ಈ ಕಾರಣಕ್ಕೆ ಕಳೆದ 20 ವರ್ಷಗಳಿಂದ ದುಡಿಯುತ್ತಿದ್ದ ಕಾರ್ಮಿಕರನ್ನು ತಾತ್ಕಾಲಿಕವಾಗಿ ವಜಾ ಮಾಡಿರುವುದರಿಂದ 286 ಕಾರ್ಮಿಕರು ಬೀದಿಪಾಲಾಗಿದ್ದಾರೆ.
ತಮ್ಮನ್ನು ಮರು ನೇಮಕ ಮಾಡಿಕೊಳ್ಳುವಂತೆ ಸ್ಥಳೀಯ ಶಾಸಕರಿಗೂ, ಜಿಲ್ಲಾ ಉಸ್ತುವಾರಿ ಸಚಿವರಿಗೂ, ಸಂಬಂಧಪಟ್ಟ ಎಲ್ಲಾ ಇಲಾಖೆಯ ಸಚಿವರುಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ರೀತಿಯ ಪ್ರಯೋಜನವಾಗದೇ ಇರುವುದರಿಂದ ಕಾರ್ಮಿಕರು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಬೀದಿಪಾಲಾದ ಕಾರ್ಮಿಕರು ಇದೇ ಕೆಲಸವನ್ನು ನಂಬಿಕೊಂಡು ಸಂಸಾರ ನಡೆಸುತ್ತಿದ್ದು, ಇದರಿಂದ ನೌಕರರ ಸಂಸಾರ ಬೀದಿಪಾಲು, ಮಕ್ಕಳ ವಿದ್ಯಾಭ್ಯಾಶ, ಮನೆ ಬಾಡಿಗೆ ಕಟ್ಟಲು ತುಂಬಾ ಕಷ್ಟಕರವಾಗಿದ್ದು, ಉಲ್ಲೇಖದಲ್ಲಿ ನಮೂದಿಸಲಾಗಿದ್ದ ಸರ್ಕಾರದ ಆದೇಶದಲ್ಲಿ ಮರು ಹೊಂದಾಣಿಕೆ ಮಾಡಲು ಸೂಚಿಸಿದ್ದರೂ ಸಹಕ ಅಧಿಕಾರಿಗಳು “ಡಿ” ವೃಂದದ ನೌಕರರ ಮೇಲೆ ಚೆಲ್ಲಾಟವಾಡಿದ್ದಾರೆ ಎಂದು ನೌಕರರು ದೂರಿದ್ದಾರೆ.
ಹೊರಗುತ್ತಿಗೆ ಆಧಾರದಲ್ಲಿ ಸಂಸ್ಥೆಗಳಲ್ಲಿ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲು ಟೆಂಡರನ್ನು ಕರೆ ಮಾಡುವುದಕ್ಕೆ ಮುಂದಾಗುತ್ತಿದ್ದು. ವಜಾಗೊಳಿಸಿರುವ ಕಾರ್ಮಿಕರನ್ನೇ ಮರು ನೇಮಕ ಮಾಡಿಕೊಳ್ಳಲು ಕ್ರಮ ವಹಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಧರಣಿ ನಡೆಸಲಾಗುತ್ತಿದೆ.
ನಮ್ಮ 2019 ರ ನವೆಂಬರ್ ಹಿಂದಿನ ಬಾಕಿ ವೇತನ ಪಾವತಿ ಮಾಡಬೇಕು. ಪ್ರತಿ ಕಾರ್ಮಿಕರಿಗೆ ಕನಿಷ್ಠ ಸುಮಾರು 2 ವರ್ಷಗಳ ವೇತನ ಬಾಕಿ ಪಾವತಿಸಬೇಕು. ಕಮಲಾಪುರ, ಸಿರುಗುಪ್ಪ, ತೆಕ್ಕಲಕೋಟೆ, ಹಗರಿಬೊಮ್ಮನಹಳ್ಳಿ ಹೂವಿನಹಡಗಲಿ, ಸ್ಥಳೀಯ ಸಂಸ್ಥೆಗಳಲ್ಲಿ ಬಾಕಿ ವೇತನ ಪಾವತಿಸಿರುವುದಿಲ್ಲ. ಹಾಗೆಯೇ ಪಿ.ಎಫ್., ಇ.ಎಸ್.ಐ. ಕೂಡಾ ಪಾವತಿಸಿರುವುದಿಲ್ಲ. ಕಮಲಾಪುರ ಮತ್ತು ಇತರೆ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಮಿಕರಿಗೆ 2015-16 ರಿಂದಲೇ ಪಿ.ಎಫ್. ಮತ್ತು ಇ.ಎಸ್.ಐ. ಪಾವತಿ ಮಾಡಿರುವುದಿಲ್ಲ. ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ ನೌಕರರಿಗೆ 2015-16ನೇ ಸಾಲಿನಿಂದ ವೇತನ ಬಾಕಿ ಇರುತ್ತಾರೆ. ಸಿರುಗುಪ್ಪ ನಗರಸಭೆ ವತಿಯಿಂದ 2 ವರ್ಷದಿಂದ ವೇತನ ಬಾಕಿ ಇರುತ್ತದೆ. ಗುತ್ತಿಗೆ ರದ್ದು ಮಾಡಿ ನೇರ ಪಾವತಿ ಮಾಡಬೇಕು ಸೇರಿದಂತೆ ತಮ್ಮ ಬೇಡಿಕೆಗಳನ್ನು ಧರಣಿ ನಿರತರು ಜಿಲ್ಲಾಡಳಿತದ ಮುಂದೆ ಇಟ್ಟಿದ್ದಾರೆ.