(ಸಂಜೆವಾಣಿ ವಾರ್ತೆ)
ವಿಜಯಪುರ:ಜು.3: ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸಿಕೊಡುವಲ್ಲಿ ದಾರ್ಶನಿಕ ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಅವರು ಕಾರ್ಯ ಅಪಾರ ಹಾಗೂ ಅನನ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಹೇಳಿದರು.
ಜಿಲ್ಲಾಡಳಿ,ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಅವರ ಜನ್ಮ ದಿನದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂತಹ ದಾರ್ಶನಿಕರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ ವಚನ ಪಿತಾಮಹ ಡಾ.ಫ.ಗು ಹಳಕಟ್ಟಿ ಅವರು ಹಗಲಿರುಳು ಶ್ರಮಿಸಿ ಕಷ್ಟಗಳನ್ನು ಲೆಕ್ಕಿಸದೇ ಅಪಾರ ಹಾಗೂ ಅಗಾಧವಾದ ವಚನ ಸಾಹಿತ್ಯವನ್ನು ನೀಡಿದ್ದಾರೆ.
ಅವರ ಸಾರ್ಥಕ ಸಾಧನೆಯನ್ನು ಇಂದಿನ ಯುವ ಪೀಳಿಗೆ ಅರಿತುಕೊಳ್ಳಬೇಕು. ಮಹಾಚೇತನಗಳ,ದಾರ್ಶನಿಕರ ಹಾಗೂ ಚಿಂತಕರ ಹಾಗೂ ಸಮಾಜ ಸುಧಾರಕರು ಈ ಸಮಾಜಕ್ಕೆ ನೀಡಿದ ಕೊಡುಗೆ ಅವರ ಜೀವನಾದರ್ಶಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಸಾಧನೆಗೆ ಇಂತಹ ದಾರ್ಶನಿಕರ ತತ್ವಾದರ್ಶಗಳು ಪ್ರೇರಣೆಯಾಗಬೇಕು ಎಂದು ಹೇಳಿದರು.
ಸಾಹಿತಿ ಡಾ. ಸಂಗಮೇಶ ಮೇತ್ರಿ ಅವರು ಉಪನ್ಯಾಸ ನೀಡಿ, ಫ.ಗು ಹಳಕಟ್ಟಿ ಅವರ ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳ ಬಗ್ಗೆ ಮಾತನಾಡಿ, ತಮ್ಮ ಇಡೀ ಜೀವನವನ್ನು ಸಮಾಜಕ್ಕಾಗಿ ಮುಡುಪಾಗಿಟ್ಟವರು ಫ.ಗು ಹಳಕಟ್ಟಿಯವರು.ಅವರು ಸಮಾಜ ಸೇವೆಗೆ ಬಳಸಿಕೊಂಡ ಮಾರ್ಗ ಶರಣರ ಮಾರ್ಗ,ಅಂದರೆ ಕಾಯಕ ನಿಷ್ಠೆ. ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಒತ್ತು ನೀಡಿದರು.
ಮಹಿಳೆಯರಿಗಾಗಿಯೇ ಶಾಲೆ ಆರಂಭಿಸಿದರು.ಮನೆ-ಮನೆ ತಿರುಗಾಡಿ ಅರಿವು ಮೂಡಿಸಿದರು.ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ ತಿಳಿಸಿದರು. ಸಹಕಾರ ತತ್ವ ಅಳವಡಿಸಿಕೊಂಡಿದ್ದ ಅವರು, ಪ್ರತಿ ವ್ಯಾಪಾರಸ್ಥರಿಗೂ ಕನ್ನಡ ಬಳಸಲು ಪ್ರೇರೇಪಿಸುತ್ತಿದ್ದರು. ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು.ಬರಗಾಲ ನಿವಾರಣಾ ಕೇಂದ್ರ ಆರಂಭಿಸಿದರು. ಕನ್ನಡ ನಾಡು ನುಡಿಗೆ ಶ್ರಮಿಸಿದರು. ಸಹಕಾರ ಬ್ಯಾಂಕ್ ಆರಂಭಿಸಿದರು. ಸಮಾಜದ ಬಗೆಗೆ ಕಾಳಜಿ ಹೊಂದಿದ್ದರು.ಶರಣರ ತತ್ವ ಮತ್ತು ಕಾಯಕ ತತ್ವ ಅಳವಡಿಸಿಕೊಂಡಿದ್ದರು ಎಂದು ಹೇಳಿದರು.
ವಿಜಯಪುರದಲ್ಲಿ ಹತ್ತಿ ಮಾರಾಟ ಕೇಂದ್ರ ಆರಂಭಿಸಿದ ಡಾ.ಫ.ಗು.ಹಳಕಟ್ಟಿಯವರು, ಒಕ್ಕಲುತನ ಅಭಿವೃದ್ಧಿ ಸಂಘ ಆರಂಭಿಸಿದರು. ಮಣ್ಣಿನ ಮಹತ್ವ ಅದನ್ನು ಉಳಿಸುವ ಬಗೆಗೆ ರೈತರಿಗೆ ಅರಿವು ಮೂಡಿಸುತ್ತಿದ್ದರು. ಶೈಕ್ಷಣಿಕ, ಕೃಷಿ, ಸಮಾಜ, ಆರ್ಥಿಕ, ಹಲವು ಕ್ಷೇತ್ರಗಳಲ್ಲಿ ಶ್ರಮಿಸಿದರು.ಹಲವು ಭಾಷೆಗಳ ಬಲ್ಲವರಾಗಿದ್ದರು. 250 ವಚನಕಾರರ ವಚನ ಸಾಹಿತ್ಯ ಬೆಳಕಿಗೆ ತಂದ ಬಿಜಾಪೂರದ ಪ್ರಭೆ ಎಂದು ಹೇಳಿದರು.
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಬದುಕು ಹಾಗೂ ಬರಹದ ಕುರಿತು ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಕಾರ್ಯದರ್ಶಿಗಳಾದ ಡಾ.ಎಂ.ಎಸ್ ಮದಬಾವಿ ಅವರು ಮಾತನಾಡಿ, ಸತ್ಯಕ್ಕಾಗಿ ಬದುಕಿದ ಶರಣ ಡಾ.ಫ.ಗು.ಹಳಕಟ್ಟಿ ಅವರು ಶರಣರ ಇತಿಹಾಸ, ಸಾಹಿತ್ಯ ಪರಿಶೋಧಿಸಿದ ಸತ್ಯ ಶೋಧಕ ಹಾಗೂ ಸಂಶೋದಕ ಇವರು. ಇಪ್ಪತ್ತನೇ ಶತಮಾನದ ಈ ಶರಣ, ಹನ್ನೆರಡನೇ ಶತಮಾನದ ಶರಣರ ಇತಿಹಾಸ, ವಚನ ಸಾಹಿತ್ಯ ತಿಳಿಯಪಡಿಸಿದರು. ತಳಸ್ಪರ್ಶಿ ಸಂಶೋಧನೆ ಮಾಡಿದರು. ತಮ್ಮನ್ನು ತಾವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು ಎಂದು ಹೇಳಿದರು.
ಇಪ್ಪತ್ತು ವರ್ಷಗಳ ಕಾಲ ವಚನಗಳ ಸಂಗ್ರಹ ಕಾರ್ಯವನ್ನು ಮನೆ ಮನೆ ತಿರುಗಾಡಿ ಹಸ್ತ ಪ್ರತಿ ಸಂಗ್ರಹಿಸಿದರು.ವಚನ ಶಾಸ್ತ್ರ ಭಾಗ-1 ಪ್ರಕಟಿಸಿದರು. 1925ರಲ್ಲಿ ಪ್ರಿಂಟಿಂಗ್ ಪ್ರೆಸ್ ಖರೀದಿಸಿದರು. 165 ಪುಸ್ತಕಗಳನ್ನು ಪ್ರಕಟಿಸಿದರು. ಹಲವು ವರ್ಷಗಳವರೆಗೆ ಶಿವಾನುಭವ ಪತ್ರಿಕೆ ನಡೆಸಿದರು. ಹಲವಾರು ಕಷ್ಟಗಳು ಎದುರಾದರೂ ದೃತಿಗೆಡದೇ ಶರಣರ ವಚನ ಸಾಹಿತ್ಯವನ್ನು ಈ ಸಮಾಜಕ್ಕೆ ದೊರಕಿಸಿಕೊಟ್ಟ ಸಂತ ಎಂದು ಹೇಳಿದರು.
ಡಾ.ಫ.ಗು ಹಳಕಟ್ಟಿ ಅವರೊಂದಿಗೆ ಕಾರ್ಯನಿರ್ವಹಿಸಿದ ಹಿರಿಯರಾದ ಮಹಾಂತ ಗುಲಗಂಜಿ ಹಾಗೂ ಫ.ಗು.ಹಳಕಟ್ಟಿ ಅವರ ಮೊಮ್ಮಗ ಗಿರೀಶ ಹಳಕಟ್ಟಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಚನ ಗಾಯನ,ನಾಟ್ಯಕಲಾ ಡ್ಯಾನ್ಸ್ ಶಾಲೆ ವತಿಯಿಂದ ವಚನ ನೃತ್ಯ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು. ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಜಿಲ್ಲಾ ಪಂಚಾಯತಿಯ ಯೋಜನಾ ಉಪ ನಿರ್ದೇಶಕ ಎ.ಬಿ.ಅಲ್ಲಾಪೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಬಿ.ಎಂ.ನೂಲವಿ, ಎ.ಬಿ.ಅಂಕದ ಹಾಗೂ ಸಾಹಿತ್ಯಾಭಿಮಾನಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.