ವಚನ ಸಾಹಿತ್ಯ ರಕ್ಷಣೆಗೆ ಅಕ್ಕನಾಗಮ್ಮ ಬಹುದೊಡ್ಡ ಕೊಡುಗೆ

ಭಾಲ್ಕಿ:ಅ.17: ವಚನ ಸಾಹಿತ್ಯ ರಕ್ಷಣೆಗೆ ಶರಣೆ ಅಕ್ಕನಾಗಮ್ಮಾ ತಾಯಿ ಅವರು ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು. ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನ ಮತ್ತು ಅಕ್ಕನ ಬಳಗದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಮರಣವೇ ಮಹಾನವಮಿ ಮತ್ತು ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ರೂಪಿಸುವಲ್ಲಿ ಅಕ್ಕನಾಗಮ್ಮ ತಾಯಿ ಪಾತ್ರ ದೊಡ್ಡದಾಗಿದೆ. ಬಸವಣ್ಣನವರಿಗೆ ಹುಟ್ಟಿನಿಂದ ಲಿಂಗೈಕ್ಯ ಆಗುವವರೆಗೆ ಅವರ ಜತೆಗೆ ಸಮರ್ಪಣೆಯಿಂದ ಬಾಳಿದ ತಾಯಿ ಎಂದರೆ ಅಕ್ಕನಾಗಮ್ಮ. ಅವರ ತ್ಯಾಗದಿಂದಲೇ ವಚನ ಸಾಹಿತ್ಯ ಉಳಿದಿದೆ. ಅದಕ್ಕಾಗಿ ನಾವು ಶರಣೆಯರ ಸ್ಮರಣೆ ಮಾಡುವುದರೊಂದಿಗೆ, ನವರಾತ್ರಿ ಆಚರಿಸಬೇಕೆಂದು ತಿಳಿಸಿದರು.

ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ಗೀತಾ ಈಶ್ವರ ಖಂಡ್ರೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಗುರು ಕಾಲೋನಿಯ ಅಕ್ಕನ ಬಳಗದ ಮಹಿಳೆಯರು ಬಸವ ಗುರುವಿನ ಪೂಜೆ ನೆರವೇರಿಸಿದರು. ಜಗದೀಶ್ವರಿ ಕಾರಬಾರಿ ಅವರು ಅಕ್ಕನಾಗಮ್ಮನ ಜೀವನ ದರ್ಶನ ಕುರಿತು ಅನುಭಾವ ನೀಡಿದರು. ಪ್ರಭಾ ಕರಕಾಳೆ, ನಿರ್ಮಲಾ ಪಾಟೀಲ್, ರೇಖಾ ಮಹಾಜನ, ಗೀತಾ ಕರಕಾಳೆ, ಸರೋಜನಿ ಪಾಟೀಲ್ ಅವರು ಅಕ್ಕನ ನಾಗಮ್ಮನವರ ಜೀವನಾಧಾರಿತ ಸ್ತಬ್ಧಚಿತ್ರ ಪ್ರದರ್ಶಿಸಿದರು. ಶ್ರೀದೇವಿ ಶಾಂತಯ್ಯ ಸ್ವಾಮಿ ವಚನ ಗಾಯನ ಮಾಡಿದರು. ವಿಜಯಲಕ್ಷ್ಮಿ ಹೊಸಾಳೆ ಧರ್ಮಗ್ರಂಥ ಪಠಣ ಮಾಡಿದರು. ಅಂಜಲಿ ಅಷ್ಟೂರೆ ವಚನ ನೃತ್ಯ ನಡೆಸಿಕೊಟ್ಟರು.

ಸಮಿತಿ ಅಧ್ಯಕ್ಷೆ ಸುವರ್ಣಾ ಓಂಕಾರ ಬಲ್ಲೂರೆ ಅವರು ಸ್ವಾಗತಿಸಿದರು. ಗೀತಾ ಪಾಟೀಲ್ ನಿರೂಪಿಸಿದರು. ಶೋಭಾ ಸಾವಳೆ ವಂದಿಸಿದರು.