ವಚನ ಸಾಹಿತ್ಯ ಮೂಲಕ ಸಾಮಾಜಿಕ ಕ್ರಾಂತಿ

*

ಸಂಜೆವಾಣಿ ವಾರ್ತೆ

ಚನ್ನಗಿರಿ. ಡಿ.3;‌ ಬಸವಾದಿ ಶಿವಶರಣರು ಸಮಾಜದ ಬದಲಾವಣೆಗೆ ಅಪಾರವಾದ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ವಚನ ಸಾಹಿತ್ಯದ ಮೂಲಕ ಜಗತ್ತಿಗೆ ಸಂದೇಶವನ್ನು ಸಾರಿ ಸಮಾಜ ಪರಿವರ್ತನೆಗೆ ಹೋರಾಟ ನಡೆಸಿದ್ದಾರೆ. ವಚನ ಸಾಹಿತ್ಯದ ಮೂಲಕ ಮೌಢ್ಯಗಳನ್ನು ತೊಡೆದು ಹಾಕಿ ಅಜ್ಞಾನದ ಅಂಧಕಾರದಲ್ಲಿದ್ದ ಸಮಾಜದ ಬದಲಾವಣೆಗೆ ಮುನ್ನುಡಿ ಬರೆದಿದ್ದಾರೆ. ವಚನ ಸಾಹಿತ್ಯವನ್ನು ನಮ್ಮ ತಲೆಮಾರಿಗೆ ಕೊನೆಯಾಗದೇ ಮುಂದಿನ ತಲೆಮಾರಿಗೂ ಕೊಂಡೊಯ್ಯಬೇಕು ಎಂದು ಸಾಹಿತಿ ಫೈಜ್ನಟ್ರಾಜ್ ತಿಳಿಸಿದರು.ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣದ ಜನತಾ ಪ್ರೌಢಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತ ವಚನಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಉನ್ನತರನ್ನು ಒಳಗೊಂಡು ಪ್ರತಿಯೊಬ್ಬರ ಜೀವನಾನುಭದಿಂದ ರೂಪಿತವಾದ ಅನುಭವಜನ್ಯ ಪ್ರಮಾಣಗಳು. ಆದುದರಿಂದ ಅವು ಜೀವನದ ಸಾರ್ಥಕತೆಗೆ ತೀರಾ ಹತ್ತಿರವಾಗಿವೆ. ಯಾರೋ ಒಬ್ಬ ಕುಳಿತಲ್ಲೇ ತನ್ನ ವಿಚಾರ ಲಹರಿಯನ್ನು ಹರಿಯಬಿಟ್ಟು ಕಾಲ್ಪನಿಕ ಅಂಶಗಳನ್ನು ದಾಖಲಿಸಿದ ಸಾಹಿತ್ಯ ಖಂಡಿತ ಅಲ್ಲ. ಅತೀ ಸರಳ ಸುಂದರ ಆಡು ಭಾಷೆಯ ನಿರೂಪಣೆಯಲ್ಲಿ ಬಸವಾದಿ ಶರಣರು ದಿವ್ಯ ಜ್ಞಾನದ ಪರಿಚಯವನ್ನು, ಪ್ರೇರಕ ಶಕ್ತಿಯ ರೂಪದಲ್ಲಿ ವಚನಸಾಹಿತ್ಯದ ಮೂಲಕ ಮನುಕುಲಕ್ಕೆ ನೀಡಿದ್ದಾರೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಪ್ರಾಸ್ತಾವಿಕ ಮಾತನಾಡಿ ಪರಿಷತ್ತು ನಡೆದು ಬಂದ ದಾರಿ ಹಾಗೂ ದತ್ತಿಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕ ಆರ್.ಎಂ.ಮಹಾದೇವಪ್ಪ, ಎಂ.ಬಿ.ಜಯಣ್ಣ, ತ್ಯಾಗರಾಜ್,ಕೆ.ಪಿ.ಜಯಪ್ಪ,ಎಂ.ಜಿ.ಶಿವಕುಮಾರ್, ಕೆ.ಎಸ್.ಪುಷ್ಪಾವತಿ ,  ಎಂ.ಎಸ್.ನಾಗರಾಜ್ ಮತ್ತಿತರರು ಇದ್ದರು.