ವಚನ ಸಾಹಿತ್ಯ ಮಾನವೀಯ ಮೌಲ್ಯಗಳ ಸಾಗರ

ಮಧುಗಿರಿ, ಸೆ. ೨ ವಚನ ಸಾಹಿತ್ಯ ಮಾನವೀಯ ಮೌಲ್ಯಗಳ ಮಹಾಸಾಗರ. ಮಧುಗಿರಿ ಶರಣರು ನುಡಿದಂತೆ ನಡೆದರು. ಅಲ್ಲದೆ ರಾಜಾಶ್ರಯದಿಂದ ಜನಾಶ್ರಯಕ್ಕೆ ಸಾಹಿತ್ಯವನ್ನು ತಂದು ಬೆಳೆಸಿದರು ಎಂದು ಹಿರಿಯ ಸಾಹಿತಿ ಪ್ರೊ ಮ.ಲ.ನ ಮೂರ್ತಿ ಹೇಳಿದರು.
ಪಟ್ಟಣದ ಗೌತಮ ಬುದ್ಧ ಪದವಿಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಶರಣ ಸಾಹಿತ್ಯ ಘಟಕದ ವತಿಯಿಂದ ಏರ್ಪಡಿಸಿದ್ದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ ೧೦೮ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರಂಗ ಶುದ್ದಿಗೆ ಬದ್ಧರಾಗಬೇಕು. ಇಹಲೋಕದಲ್ಲಿ ಸಲ್ಲುವವರು ಪರಲೋಕದಲ್ಲೂ ಸಲ್ಲುವರು. ಶರಣರು ಸ್ಥಾಪಿಸಿದ ಅನುಭವ ಮಂಟಪವಾದ ವಿವಾದ ಸಂವಾದಗಳ ಮುಕ್ತ ವಿಶ್ವವಿದ್ಯಾಲಯವಾಗಿತ್ತು. ಸ್ತುತಿ ನಿಂದನೆಗಳನ್ನು ಸಮಾನವಾಗಿ ಸ್ವೀಕರಿಸಬೇಕು. ದಯೆ, ಧರ್ಮದ ಮೂಲವಾಗಲಿ ಎಂಬುದು ಶರಣರ ತತ್ವವಾಗಿತ್ತು ಎಂದರು.
ವಿಶೇಷ ಉಪನ್ಯಾಸ ನೀಡಿದ ಆಧುನಿಕ ವಚನಕಾರ ರುದ್ರಮೂರ್ತಿ ಮಾತನಾಡಿ, ಸಕಲ ಜೀವಾತ್ಮಕ ಲೆಸಿಗಾಗಿ ಶರಣರು ಶ್ರಮಿಸಿದ್ದಾರೆ. ಶರಣರ ನುಡಿ ದರ್ಪವೇರಿದ ದೇಹಕ್ಕೆ ಕಾಡಾಣಿ ಇದ್ದ ಹಾಗೆ ನಿಯಂತ್ರಿಸುತ್ತದೆ ಎಂದರು.
ಆಸೆ, ಐಶ್ವರ್ಯ, ಅಧಿಕಾರ ರಾಜ್ಯ ಬೇಡವೆಂದ ಶರಣರು ಶರಣರ ನುಡಿಯನ್ನು ಮಾತ್ರ ಬಯಸಿದರು. ಸುಧಾರಣೆ ಪ್ರಯತ್ನಗಳು ಶರಣರ ಸಾಹಿತ್ಯದ ಪೂರಕವಾಗಿ ಮೂಡಿ ಬಂದವು ಎಂದರು
ಮುಖ್ಯ ಅತಿಥಿಗಳಾಗಿ ಪ್ರಾಂಶುಪಾಲ ರಂಗಪ್ಪ ಮಾತನಾಡಿ, ಶರಣ ಸಂಸ್ಕೃತಿಯನ್ನು ಜನಸಾಮಾನ್ಯರು ಇಂದಿಗೂ ಪಾಲಿಸುತ್ತಿದ್ದಾರೆ. ಸಮಾಜದಲ್ಲಿ ಸಮಾನತೆ ಅನುಷ್ಠಾನಕ್ಕೆ ಬರುವಲ್ಲಿ ಶರಣರ ಪ್ರಯತ್ನ ಸದಾ ಸ್ಮರಣೀಯ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಮಹಾಲಿಂಗೇಶ್, ವಚನಕಾರರ ವೆಂಕಟರಮಣಪ್ಪ, ಪ್ರಾಂಶುಪಾಲ ದೊಡ್ಡಮಲ್ಲಯ್ಯ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಉಮಾಮಲ್ಲೇಶ್, ನಂಜಮ್ಮ, ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.