ವಚನ ಸಾಹಿತ್ಯ ಗಟ್ಟಿಯಾದಷ್ಟು ಕನ್ನಡ ಭಾಷೆ ಗಟ್ಟಿಯಾತ್ತದೆ

ಅಥಣಿ : ಜ.25:12ನೇ ಶತಮಾನದಲ್ಲಿ ಬಸವಾದಿ ಶರಣರು ನೀಡಿದ ವಚನ ಸಾಹಿತ್ಯ ಇಂದಿಗೂ ನಮ್ಮೆಲ್ಲರಿಗೆ ದಾರಿದೀಪವಾಗಿದೆ. ಬಸವಣ್ಣನ ವಚನ ಸಾಹಿತ್ಯ ಮತ್ತು ಸಮಾಜ ಸುಧಾರಣೆಯ ಹಿರಿಮೆಯನ್ನ ಕಂಡು ರಾಜ್ಯ ಸರ್ಕಾರ ಅವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ನಮ್ಮ ಕನ್ನಡ ನಾಡಿನ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಶರಣರು ನೀಡಿದ ಕನ್ನಡ ವಚನ ಸಾಹಿತ್ಯ ಇರುವವರೆಗೆ ಕನ್ನಡ ಭಾಷೆ ಗಟ್ಟಿಯಾಗಿರುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಡಾ.ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.
ಅವರು ಅಥಣಿ ಮೋಟಗಿ ಮಠದಲ್ಲಿ 2024ರ ಶರಣ ಸಂಸ್ಕೃತಿ ಗಡಿನಾಡು ನುಡಿ ಹಬ್ಬದ ಉದ್ಘಾಟನೆ ಮತ್ತು ಸುವರ್ಣ ಕರ್ನಾಟಕ ಸಂಭ್ರಮ ಹಾಗೂ ವಚನ ಪಿತಾಮಹ ಡಾ. ಪ. ಗು ಹಳಿಕಟ್ಟಿ ವಚನ ಸಂಶೋಧನಾ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳು ಇಂದಿಗೂ ನಮ್ಮೆಲ್ಲರಿಗೆ ದಾರಿದೀಪವಾಗಿವೆ. ಶರಣರ ವಚನಗಳನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಅವುಗಳ ಬಗ್ಗೆ ಸಂಶೋಧನೆ ನಡೆಸಿ ವಚನ ಸಾಹಿತ್ಯವನ್ನು ನಾಡಿಗೆ ಪರಿಚಯಿಸಿದ ಕೀರ್ತಿ ಡಾ.ಫ. ಗು ಹಳಿಕಟ್ಟಿ ಅವರಿಗೆ ಸಲ್ಲುತ್ತದೆ.ವಿಶ್ವಗುರು ಬಸವಣ್ಣನವರು ನೀಡಿದ ವಚನ ಸಾಹಿತ್ಯ ಕನ್ನಡ ಭಾಷೆಯಲ್ಲಿ ಅಷ್ಟೇ ಅಲ್ಲ, ದೇಶದ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ. ಇಂತಹ ವಚನ ಸಾಹಿತ್ಯವನ್ನು ಪ್ರತಿ ಮನೆ ಮನಗಳಿಗೆ ಮುಟ್ಟಿಸುವ ಕಾಯಕ ಆಗಬೇಕು. ಪ್ರತಿ ಮನೆಗಳು ಬಸವ ಸಂಸ್ಕೃತಿ ಹೊಂದಬೇಕು. ಮಕ್ಕಳಿಗೆ ವಚನ ಸಾಹಿತ್ಯವನ್ನು ಕಲಿಸಿಕೊಡಬೇಕು ಇಂದಿನ ಮಕ್ಕಳಿಗೆ ಪ್ರತಿ ಮನೆಯಲ್ಲಿ ತಾಯಂದಿರು ಉತ್ತಮ ಸಂಸ್ಕಾರವನ್ನು ಮತ್ತು ವಚನಗಳನ್ನು ಕಲಿಸಿಕೊಡುವುದು ಅಗತ್ಯವಾಗಿದೆ. ಬಾಯಲ್ಲಿ ಬಸವ ಮಂತ್ರ, ಹಣೆಯಲ್ಲಿ ವಿಭೂತಿ, ಕೊರಳಲ್ಲಿ ಇಷ್ಟಲಿಂಗ ಮತ್ತು ರುದ್ರಾಕ್ಷಿ ಧರಿಸುವ ಸಂಸ್ಕೃತಿ ಪ್ರತಿ ಮನೆ ಮನಗಳಲ್ಲಿ ನಡೆಯಬೇಕು ಎಂದು ಹೇಳಿದರು.
ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಅವರು ಯುವ ಯತಿಗಳಾಗಿದ್ದರೂ ಕೂಡ ವಿಚಾರಧಾರೆಗಳು, ದೂರ ದೃಷ್ಟಿ, ಸಾಹಿತ್ಯ ಜ್ಞಾನ, ಉತ್ತಮ ವಾದ್ಮಿಗಳಾಗಿ ಸಂಘಟನಾ ಚತುರರಾಗಿದ್ದಾರೆ. ಅವರು ಗಡಿನಾಡಿನಲ್ಲಿ ಕೇವಲ ಮಠವನ್ನು ಕಟ್ಟದೇ ಕನ್ನಡದ ಮನಸ್ಸುಗಳನ್ನು ಕಟ್ಟುವ ಕಾಯಕ ಮಾಡುತ್ತಿದ್ದಾರೆ. ಮಹಾತ್ಮರ ಚರಿತಾಮೃತ ಮಹಾ ಗ್ರಂಥವನ್ನು ರಚಿಸುವ ಮೂಲಕ ಕನ್ನಡ ನಾಡಿನ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ನೀಡಿದ್ದಾರೆ. ನಾಡಿನ ಸಾಹಿತ್ಯ ಲೋಕದ ಮಹಾ ಗ್ರಂಥಗಳಲ್ಲಿ ಕೂಡ ಇದು ಒಂದಾಗಿದೆ. ಅವರ ಸಮಾಜ ಸೇವೆ ಮತ್ತು ಕನ್ನಡ ಕಾಯಕ ನಿರಂತರವಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಸಮಾರಂಭದ ನೇತೃತ್ವ ವಹಿಸಿದ್ದ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿದರು. ಸಮಾರಂಭದಲ್ಲಿ ಶೇಗುಣಸಿಯ ಡಾ. ಮಹಾಂತ ಪ್ರಭು ಸ್ವಾಮೀಜಿ, ಶೆಟ್ಟರ್ ಮಠದ ಮರುಳುಸಿದ್ದ ಸ್ವಾಮೀಜಿ, ಗುಳೇದಗುಡ್ಡದ ಕಾಶಿನಾಥ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಥಣಿ ಶಾಂಕಿತ ಪುಸ್ತಕ ಪ್ರಶಸ್ತಿಯನ್ನು ಅಥಣಿಯ ಖ್ಯಾತ ಸಾಹಿತಿ, ಅನುವಾದಕ ಡಾ. ಜೆಪಿ ದೊಡ್ಡಮನಿ ಅವರಿಗೆ ನೀಡಿ ಗೌರವಿಸಲಾಯಿತು. ಸಮಾಜಮುಖಿ ಸೇವೆ ಸಲ್ಲಿಸಿದ ನ್ಯಾಯವಾದಿ ಕಲ್ಲಪ್ಪ ವಣಜೋಳ, ಸಮಾಜಸೇವಕ ಅನಿಲ ಸುಣಧೋಳಿ, ಡಾ. ಬಿ ಎಂ ಹಿರೇಮಠ, ಮಿಥನ ಅಂಕಲಿ ಸೇರಿದಂತೆ ಇನ್ನಿತರರಿಗೆ ಸನ್ಮಾನಿಸಲಾಯಿತು.
ವಿಮೋಚನಾ ಸಂಘದ ಅಧ್ಯಕ್ಷ ಬಿ ಎಲ್ ಪಾಟೀಲ ಪ್ರಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮುರಿಗೆಪ್ಪ ತೊದಲ್ಬಗಿ, ಶಿವಾನಂದ ಬುರ್ಲಿ, ಸತೀಶ ಪಾಟೀಲ, ಅಶೋಕ ಹೊಸೂರ, ಮುರುಗೇಶ ಬಳ್ಳೊಳ್ಳಿ, ವಿಜು ನೇಮಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.