ವಚನ ಸಾಹಿತ್ಯ ಅಧ್ಯಯನದಿಂದ ಗಟ್ಟಿ ಸಾಹಿತ್ಯ ಬರಲು ಸಾಧ್ಯ : ದೊಡ್ಡಬಸಪ್ಪ ಬಳೂರಗಿ

ಶಹಾಪುರ:ನ.10:ಯುವ ಸಾಹಿತಿಗಳು, ಸಾಹಿತ್ಯ ರಚನೆ ಮಾಡುವ ಮುನ್ನ ವಚನಸಾಹಿತ್ಯ ವನ್ನು ಅಧ್ಯಯನ ಮಾಡಿದರೆ, ಗಟ್ಟಿ ಸಾಹಿತ್ಯ ಹೊರಬರಲು ಸಾಧ್ಯ ಎಂದು ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹಿರಿಯ ಸಾಹಿತಿ ದೊಡ್ಡಬಸಪ್ಪ ಬಳೂರಗಿ ಹೇಳಿದರು.

ನಗರದ ಬಸವೇಶ್ವರ ನಗರದಲ್ಲಿರುವ ಅವರ ನಿವಾಸದಲ್ಲಿ ಗ್ರಾಮೀಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಮನದಾಳದ ಮಾತು ಎಂಬ ಕಾರ್ಯಕ್ರಮದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡ ಅವರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತಾ ನಮ್ಮದು ಬಡತನದ ಕುಟುಂಬ ಅದರಲ್ಲಿಯೇ ಜೀವನ ಸಾಗಿಸುತ್ತಾ ಬಂದು ಬಾಲ್ಯದ ವಿದ್ಯಾಭ್ಯಾಸವನ್ನು ಸ್ವಗ್ರಾಮದಲ್ಲಿಯೇ ಮಾಡಿ ನಂತರ ಬಾಗಲಕೋಟಿಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಬಿಎ ಪದವಿ ಪಡೆದು, ಧಾರವಾಡ ವಿಶ್ವವಿದ್ಯಾಲಯದಿಂದ ಎಮ್.ಎ. (ಅರ್ಥಶಾಸ್ತ್ರ) ಪದವಿ ಪಡೆದು ಸರ್ಕಾರದ ಶಿಕ್ಷಣ ಮಹಾವಿದ್ಯಾಲಯದಿಂದ ಬಿ.ಇಡಿ ಪದವಿ ಪಡೆದು 1974 ರಲ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕನಾಗಿ ನೇಮಕಗೊಂಡೆ. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಇರುವುದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಮೂಡಿತು. ಸಾಹಿತ್ಯದ ಗೆಳೆಯರಾದ ಚಂದ್ರಕಾಂತ ಕರದಳ್ಳಿ, ಸೂಗಯ್ಯ ಹಿರೇಮಠ, ಸಿದ್ದರಾಮ ಹೊನ್ಕಲ್, ಈಶ್ವರಯ್ಯ ಮಠ ಇನ್ನೀತರ ಗೆಳೆಯರು ನನ್ನ ಸಾಹಿತ್ಯಕ್ಕೆ ಪ್ರೋತ್ಸಾಹಿಸಿದರು. ನನ್ನ ಪ್ರಥಮ ಕೃತಿಯಾದ ಶ್ರೀ ‘ಮಹಾಯೋಗಿನಿ ಮಾಣಿಕೇಶ್ವರಿ ಮಾತೆ’ (ಜೀವನ ಚರಿತ್ರೆ) ಕೃತಿ ಹೊರಬಂದಾಗ ಅಮ್ಮನವರು ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದರು ಹಾಗೂ ಅನೇಕರು ನನ್ನ ಬರವಣಿಗೆ ನೋಡಿ ಅಭಿನಂದಿಸಿದರು.

ನನ್ನ ಇನ್ನೊಂದು ಕೃತಿಯಾದ “ಭವದ ಬೀಜ” ಕೃತಿಗೆ ಕಲಬುರ್ಗಿಯ ವಿಶ್ವವಿದ್ಯಾಲಯವು 2006 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು ನಾನೆಂದೂ ಮರೆಯದ ಅವಿಸ್ಮರಣೀಯ ದಿನವಾಗಿದೆಯೆಂದು ಹೇಳಿದರು. ಯುವಕರು ಓದುವುದರಲ್ಲಿ ಸಾಹಿತ್ಯ ಕೃತಿ ರಚಿಸುವುದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. 2008 ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತನಾದ ನಂತರ ಸಾಹಿತ್ಯದ ಓದು ಬರಹ ದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ದೊಡ್ಡಬಸಪ್ಪ ಬಳೂರಗಿ ಅವರ ಕುರಿತು ಮಾತನಾಡಿದ ನಟರಾಜ ಎಸ್ ಹಿರೇಮಠ, ದೊಡ್ಡಬಸಪ್ಪ ಬಳೂರಗಿ ಅವರು ಅನೇಕ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ. 1992 ರಲ್ಲಿ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, 1995 ರಲ್ಲಿ ಕನ್ನಡ ಪುಸ್ತಕ ಅಭಿವೃದ್ಧಿ ಪ್ರಾಧಿಕಾರದ ಶಹಾಪುರ ತಾಲ್ಲೂಕಿನ ಪ್ರತಿನಿಧಿಯಾಗಿ ಹೀಗೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಇವರಿಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಮಾಂತೇಶ ಗಿಂಡಿ, ಉಪಾಧ್ಯಕ್ಷ ಅಂಬ್ರೇಶ ದೋರನಹಳ್ಳಿ, ಕಾರ್ಯದರ್ಶಿ ವಿರೇಶ ಊಳ್ಳಿ, ಸದಸ್ಯರಾದ ಯುವಕವಿ ಶಂಕರ ಹುಲಕಲ್, ಸಂದೀಪ ಹೊಸಕೇರಿ ಹಾಗೂ ಇನ್ನೀತರರು ಉಪಸ್ಥಿತರಿದ್ದರು. ನಿಂಗಣ್ಣ ತೇಕರಾಳ ಸ್ವಾಗತಿಸಿ, ವಂದಿಸಿದರು.