
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೩; ವಚನ ಸಾಹಿತ್ಯ ಎಲ್ಲಾ ಜಾತಿ, ಮತಗಳ ಜನರನ್ನು ಒಳಗೊಳ್ಳುವ ಸಾಹಿತ್ಯವಾಗಿದೆ ಎಂದು ಶಿರಮಗೊಂಡನಹಳ್ಳಿ ಬಸವಗುರು ತಪೋವನದ ಶಿವಾನಂದ ಗುರೂಜಿ ಹೇಳಿದರು.ನಗರದ ಎಆರ್‌ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶರಣ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಜಯಂತಿ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಅರಿವು, ಆಚಾರ, ಅನುಭಾವ, ಕಾಯಕ ಮತ್ತು ದಾಸೋಹ ಈ ಐದು ತತ್ವಗಳನ್ನು ಒಳಗೊಂಡಿರುವ ವಚನ ಸಾಹಿತ್ಯದ ಮೌಲ್ಯಗಳನ್ನು ಅಳವಡಿಸಿಕೊಂಡರೆ ವ್ಯಕ್ತಿಯ ಜೀವನದಲ್ಲಿ ಸುಧಾರಣೆ ಆಗಲಿದೆ ಎಂದರು.12ನೇ ಶತಮಾನದಲ್ಲಿ ಬಸವಣ್ಣನವರು ಲಿಂಗ ಮತ್ತು ಜಾತಿ ಸಮಾನತೆ ಪ್ರತಿಪಾದಿಸಿದ್ದರು. ಇದರ ಸಲುವಾಗಿ ತಮ್ಮ ಮೂಲ ಜಾತಿಯಿಂದ ಹೊರಬಂದು ಅನುಭವ ಮಂಟಪ ಸ್ಥಾಪಿಸಿದರು. ಕಾಯಕಯೋಗಿಗಳಿಗೆ ಆದ್ಯತೆ ನೀಡಿದರು. ಇದೇ ಮಾದರಿಯಲ್ಲಿ ಇಂದಿನ ಸಂಸತ್ತು ಕಾರ್ಯ ನಿರ್ವಹಿಸುವುದು ವಿಶೇಷ. ವಚನಕಾರರು ಸಮಾಜ ಸುಧಾರಣೆಗೆ ಸಾಕಷ್ಟು ಕೊಡುಗೆ ನೀಡಿದರು. ತಮ್ಮ ವಚನಗಳ ಮೂಲಕ ಸಮಾಜಕ್ಕೆ ದಾರಿದೀಪವಾದರು. ವಚನ ಸಾಹಿತ್ಯವು ಸಕಲ ಜೀವರಾಶಿಗೂ ಒಳಿತು ಬಯಸುವಂತಹದ್ದಾಗಿದೆ ಎಂದು ಅವರು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್, ಶರಣರ ವಚನಗಳನ್ನು ಜನರಿಗೆ ತಲುಪಿಸಿದ ಕೀರ್ತಿ ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ. ಹಳಕಟ್ಟಿಯವರು ತಮ್ಮ ಜೀವಿತಾವಧಿಯಲ್ಲಿ ಶ್ರಮಪಟ್ಟು ವಚನಗಳನ್ನು ಸಂಗ್ರಹಿಸಿದ್ದರಿಂದ ಇಂದು ನಮಗೆಲ್ಲಾ ಶರಣರ ವಚನಗಳು ಸಿಗುತ್ತಿವೆ ಎಂದರು.ಎಆರ್‌ಜಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಬೊಮ್ಮಣ್ಣ, ಸಂಯೋಜಕಿ ಎನ್.ಬಿ.ಜಯಶೀಲ, ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಜಂಭುನಾಥ ಕಂಚ್ಯಾಣಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.