ವಚನ ಸಾಹಿತ್ಯದ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದವರು ದೇವರ ದಾಸಿಮಯ್ಯ

ವಿಜಯಪುರ:ಮಾ.28: ಜನಸಾಮಾನ್ಯರು ಆಡುವ ಭಾಷೆಯಲ್ಲಿಯೇ ಸರಳವಾಗಿ ವಚನಗಳನ್ನು ರಚಿಸಿ ಅಂತರಂಗದ ಅನುಭವವನ್ನು ಬಿಚ್ಚಿಟ್ಟು, ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕಾಯಕವನ್ನು ಕೈಗೊಂಡು, ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಬದಲಾವಣೆಗಳನ್ನು ತರುವಲ್ಲಿ ವಚನ ಸಾಹಿತ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದವರು ದೇವರ ದಾಸಿಮಯ್ಯನವರು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಭಾನುವಾರ ಅರ್ಥಪೂರ್ಣವಾಗಿ ಆಚರಿಸಲಾದ ದೇವರ ದಾಸಿಮಯ್ಯ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿಕ್ಷಕ ಸಂತೋಷಕುಮಾರ ಎಸ್.ಬಂಡೆ ದೇವರ ದಾಸಿಮಯ್ಯ ಕುರಿತಾಗಿ ಉಪನ್ಯಾಸ ನೀಡಿ, ಕಾಯಕ, ದಾಸೋಹ, ಜ್ಞಾನಭೋದನೆ ಎಂಬ ಮೂರು ತತ್ವಪದಗಳ ಮೂಲಕ ಸಮಾಜದಲ್ಲಿರುವ ಜಾತೀಯತೆ, ಮೂಢನಂಬಿಕೆ ಹೋಗಲಾಡಿಸಿ, ಸಮಾನತೆಯನ್ನು ಸಾರಿದ ಶ್ರೇಷ್ಠ ಶರಣರು ದೇವರ ದಾಸಿಮಯ್ಯನವರು. ಇವರಿಗೆ ಹತ್ತು ಹಲವಾರು ಹೆಸರಿನಿಂದ ಕರೆಯಲಾಗುತ್ತದೆ.

“ರಾಮನಾಥ”ಎಂಬ ಅಂಕಿತ ನಾಮದೊಂದಿಗೆ ಸುಮಾರು ಹಲವು ವಚನಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಹಲವು ವಚನಗಳ ಅರ್ಥ, ಸಾರಾಂಶವನ್ನು ತಿಳಿದುಕೊಂಡು ಬಾಳುವುದರ ಜೊತೆಗೆ ಧ್ಯಾನಕ್ಕೆ ಮಹತ್ವವನ್ನು ನೀಡಬೇಕು. ವಚನ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿದ ಇವರ ಸರಳ, ಸುಲಲಿತ, ವಚನ ಸಾಹಿತ್ಯದ ತತ್ವಗಳು, ಅವರ ಬದುಕಿನ ನೀತಿ ಪಾಠಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ವಚನ ಸಾಹಿತ್ಯದ ಚರಿತ್ರೆಯನ್ನು ತಿಳಿಸುವ ಮೂಲಕ ನಾವೆಲ್ಲರೂ ಜಗತ್ತಿಗೆ ಸಾರಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ಉಪ ನಿರ್ದೇಶಕರು ಅಶೋಕ ಅಲ್ಲಾಪುರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಬಿ. ಎಂ. ನೂಲವಿ, ಎ. ಬಿ. ಅಂಕದ, ಬಿ. ಬಿ. ಬೀಳಗಿ, ಎನ್. ಎಲ್. ಪ್ಯಾಟಿ, ಭೀಮರಾಯ ಜಿಗಜಿಣಗಿ, ತಿಮ್ಮಾಪುರ, ಗಿರೀಶ್ ಕುಲಕರ್ಣಿ, ದೇವೇಂದ್ರ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು

ಮೆರವಣಿಗೆಗೆ ಚಾಲನೆ : ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬೆಳಿಗ್ಗೆ 9.30 ಗಂಟೆಗೆ ಆರಂಭವಾದ ದೇವರ ದಾಸಿಮಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ವಿಜಯಪುರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರು ಚಾಲನೆ ನೀಡಿದರು. ಮೆರವಣಿಗೆಯು ಕಲಾ ತಂಡದೊಂದಿಗೆ ಗಾಂಧಿ ವೃತ್ತ, ಬಸವೇಶ್ವರ ವೃತ್ತ,ಅಂಬೇಡ್ಕರ್ ವೃತ್ತ ಹಾಗೂ ಕನಕದಾಸ ವೃತ್ತದಿಂದ ಆಗಮಿಸಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸಮಾಪ್ತಿಗೊಂಡಿತು.