
ಕಲಬುರಗಿ,ಮಾ 14: ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ ಎಂದ ಅಕ್ಕಮಹಾದೇವಿ ಸ್ತ್ರೀಯರಿಗೆ ಸಮಾನ ಸ್ಥಾನಮಾನ ನೀಡಿ ಗೌರವಿಸಿದರು ಎಂದು ಸಾಹಿತಿ ಡಾ. ಶರಣಬಸಪ್ಪ ವಡ್ಡಣಕೇರಿ ಹೇಳಿದರು. ನಗರದ ಭವಾನಿ ನಗರದ ಬಬಲಾದ ಮಠದಲ್ಲಿ 149ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣರು ಸಂಸ್ಕಾರದ ಬೀಜವನ್ನು ಫಲವತ್ತಾದ ಭೂಮಿಯಲ್ಲಿ ಬಿತ್ತಿ ಸಮೃದ್ಧ ಸಮಾಜವನ್ನು ಕಟ್ಟಿದ್ದಾರೆ. ನಮ್ಮ ಭಾಗದ ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ಶರಣರು ಜನಿಸಿ ತಮ್ಮ ಕಾಯಕದೊಂದಿಗೆ ಇಡೀ ಜೀವನವನ್ನೇ ಸಮಾಜಕ್ಕೆ ಅರ್ಪಣೆ ಮಾಡಿದಾರೆ. ವಚನ ಸಾಹಿತ್ಯದಲ್ಲಿ ಸಮೃದ್ಧ ಸಮಾಜ ಕಟ್ಟುವ ಶಕ್ತಿ ಇದೆ ಎಂದರು. ಮುಖ್ಯ ಅತಿಥಿಗಳಾಗಿ ಉಪಳಾಂವ ಕನ್ನಡ ಶಾಲೆಯ ಅಧ್ಯಕ್ಷ ಗೌಡೇಶ್ ಬಿರಾದಾರ ಆಗಮಿಸಿದರು. ಕಾರ್ಯಕ್ರಮದ ನೇತೃತ್ವ ಶ್ರೀಮಠದ ಪೀಠಾಧಿಪತಿ ಗುರುಪಾದಲಿಂಗ ಮಹಾ ಸ್ವಾಮಿಗಳು ವಹಿಸಿದರು. ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಸ್ವಾಗತಿಸಿದರು. ಸಂಗಮೇಶ ನಾಗೂರ ನಿರೂಪಿಸಿದರು. ಮಾಣಿಕ ಮಿರ್ಕಲ್ ವಂದಿಸಿದರು. ಕಾರ್ಯಕ್ರಮದಲ್ಲಿ ರೇವಣಸಿದ್ದಯ್ಯ ಎಂ ಮಠಪತಿ, ಶರಣು ವರನಾಳ, ಶಿವರಾಜ ಭಾಲ್ಕೆಡ, ಗುರುರಾಜ ಹಸರಗುಂಡಗಿ, ಅಂಬಾರಾಯ ವಾಡಿ ಸೇರಿದಂತೆ ಹಲವರು ಭಾಗವಹಿಸಿದರು.