ವಚನ ಸಾಹಿತ್ಯಕ್ಕೆ ಚೆನ್ನಬಸವಣ್ಣನವರ ಕೊಡುಗೆ ಅಪಾರ. ಡಾ.ಗಂಗಾಂಬಿಕಾ ಅಕ್ಕ

(ಸಂಜೆವಾಣಿ ವಾರ್ತೆ)
ಬಸವಕಲ್ಯಾಣ:ನ.9: ಅಂದಿನ 12ನೇ ಶತಮಾನದ ಶರಣ ಸಮೂಹಗಳಲ್ಲಿ ಅಗ್ರಗಣ್ಯನಾದ ಹೆಸರುಗಳಲ್ಲಿ ಚನ್ನಬಸವಣ್ಣನವರದು ಬಹು ಪ್ರಮುಖವಾದುದು. ಅನುಭವ ಮಂಟಪದ ಪ್ರತಿ ವಚನಗಳಿಗೆ ಅಂತಿಮವಾಗಿ ಒಪ್ಪಿಗೆ ಕೊಡುವ ಮಹತ್ತರ ಜವಾಬ್ದಾರಿ ಇವರದ್ದಾಗಿತ್ತು ಎಂದು ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ನುಡಿದರು.
ಅಂತರ್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಭಾನುವಾರ ಇಲ್ಲಿಯ ಹರಳಯ್ಯನವರ ಗವಿಯಲ್ಲಿ ಜರುಗಿದ ಚಿನ್ಮಯ ಜ್ಞಾನಿ ಚೆನ್ನ ಬವಸಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಕಿರಿದಾದ ವಯಸ್ಸಿನಲ್ಲಿಯೇ ಅಪಾರವಾದ ಜ್ಞಾನಗಳಿಸಿ ವಚನಗಳಿಗೆ ಷಟಸ್ಥಲದ ಚೌಕಟ್ಟು ನೀಡಿದ್ದಾರೆ, ಲಿಂಗಾಯತ ಧರ್ಮದ ಆಚರಣೆಗಳಾದ ಪಂಚಾಚಾರ. ಷಟಸ್ಥಲ, ಅಷ್ಟಾವರಣಗಳನ್ನು ರೂಪಿಸಿ ಧರ್ಮಕ್ಕೆ ಆಚರಣೆಯ ಮೂಲ ನೀಡಿದ್ದಾರೆ. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಸಂರಕ್ಷಣೆಯಲ್ಲಿ ಇವರ ಪಾತ್ರ ಹಿರಿದಾಗಿದೆ. ಶರಣರು ಹೋರಾಡಿ ನಮಗಾಗಿ ಉಳಿಸಿಕೊಟ್ಟ ವಚನಗಳನ್ನು ಪ್ರತಿಯೊಬ್ಬರು ಓದಿ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘ ಕಲಬುರಗಿ ಅಧ್ಯಕ್ಷರಾದ ಡಾ.ಬಸವರಾಜ ಪಾಟೀಲ ಸೇಡಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಲ್ಲಿ ಜಗತ್ತಿನ ಜನರೆಲ್ಲ ಕಲ್ಯಾಣದತ್ತ ಬರುವ ಹಾಗೇ ನೂತನ ಅನುಭವ ಮಂಟಪ ನಿರ್ಮಾಣವಾಗುತ್ತಿದೆ. ದೇಶದ ಲಕ್ಷ-ಲಕ್ಷ ಜನರ ಭಾವನೆಗೆ ತಕ್ಕಂತೆ ಇದಕ್ಕೆ ಒಂದು ರೂಪ ಕೊಟ್ಟು ಜಗತ್ತಿನ ಕೋಟಿ ಕೋಟಿ ಜನರಿಗೆ ಪ್ರೇರಣೆ ಕೊಡುವ ಕೇಂದ್ರವಾಗುತ್ತಿದೆ. ಇದೊಂದು ಸಾಂಸ್ಕøತಿಕ ಕೇಂದ್ರವಾಗಿ ಮಾಡುವ ಪ್ರಯತ್ನ ನಡೆಯುತ್ತಿದೆ. ಕೇವಲ ತತ್ತ್ವ ಹೇಳಿದರೆ ಸಾಲದು ಅವುಗಳನ್ನು ಆಚರಣೆಯಲ್ಲಿ ತರಬೇಕು. ನುಡಿದಂತೆ ನಡೆದಾಗ ದೇವರಿಗೆ ಹಿತವವಾಗುತ್ತದೆ. ಪ್ರತಿಯೊಬ್ಬರಿಗೂ ಬಸವತತ್ತ್ವದ ಅರಿವು ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಕೆಡಿಬಿಯ ತಾಂತ್ರಿಕ ಸಲಹೆಗಾರರಾದ ಬಸವರಾಜ ಗದ್ವಾಲ ಮಾತನಾಡಿ, ಬಿಕೆಡಿಬಿಯಿಂದ ಶರಣ ಸ್ಮಾರಕಗಳ ಭೌತಿಕ ಅಭಿವೃದ್ಧಿ ಮಾಡಲಾಗಿದೆ. ಆದರೆ ಅಕ್ಕನವರಿಂದ ಇಲ್ಲಿ ಬೌದ್ಧಿಕ ಕಾರ್ಯಗಳು ನಡೆಯುತ್ತಿರುವುದು ನೋಡಿದರೆ ನಾವು ಪಟ್ಟ ಶ್ರಮ ಸಾರ್ಥಕವಾಗಿದೆ ಎಂದೆನಿಸಿ ಅತಿ ಸಂತೊಷವಾಗಿದೆ. ಹೀಗೆಯೇ ಪ್ರತಿಯೊಂದು ಶರಣ ಸ್ಮಾರಕಗಳಲ್ಲಿ ಶರಣರ ಕುರಿತಾದ ಚಿಂತನ ಗೋಷ್ಠಿಗಳು ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಮಹೇಶ ಪಾಟೀಲ, ಡಾ.ಮಲ್ಲಿಕಾರ್ಜುನ ವಡ್ಡನಕೇರೆ, ಶಂಕ್ರಣ್ಣಾ ಕೊಳಕೂರ, ಬಸವರಾಜ ಬೇಲೂರೆ, ಸುಲೋಚನಾ ಮಾಮಾ, ಶ್ರೀದೇವಿ ಕಾಕನಾಳೆ, ಸುಮಿತ್ರಾ ಡಾವರಗಾಂವೆ ಸೇರಿದಂತೆ ಅನೇಕರಿದ್ದರು. ಸಂಗಮೇಶ ತೊಗರಖೇಡೆ ನಿರೂಪಿಸಿದರು.