
ಅರಿಷಡ್ವರ್ಗಗಳೇ ಸರ್ಪಗಳು “ಹುತ್ತವ ಬಡಿದಡೆ ಹಾವು ಸಾಯ ಬಲ್ಲುದೆ ಅಯ್ಯಾ ?ಅಘೋರ ತಪವ ಮಾಡಿದಡೇನು ?ಅಂತರಂಗ ಆತ್ಮ ಶುದ್ಧಿಯಿಲ್ಲದವರನೆಂತು ನಂಬುವನಯ್ಯಾ ?ಕೂಡಲಸಂಗಮದೇವಾ ?ಹುತ್ತವನ್ನು ಮೇಲೆ ಒಡೆದು ಹಾಕಿದಾಕ್ಷಣ ಒಳಗಡೆ ಇರುವ ಹಾವು ಹೇಗೆ ಸಾಯುವುದಿಲ್ಲವೋ ಹಾಗೆ ಅಂತರಂಗ ಶುದ್ಧಿ, ಆತ್ಮ ಶುದ್ಧಿ, ಮತ್ತು ಭಾವ ಶುದ್ಧಿ,ಮನ ಶುದ್ಧಿ ಇಲ್ಲದೆ ಕೇವಲ ಎಷ್ಟೇ ಘೋರವಾದ ( ಕಠಿಣವಾದ)ದ ತಪಸ್ಸನ್ನು ಮಾಡಿ ದೇವರನ್ನು ಒಲಿಸಿ ಕೊಳ್ಳುತ್ತೇನೆಂಬ ಹಂಬಲ ಮರೀಚಿಕೆ ಅಷ್ಟೆ .ಆತ್ಮ ಸಾಧನೆಯಿಲ್ಲದೆ ಕೇವಲ ಬಾಹ್ಯವಾಗಿ ಕಠಿಣವಾದ ಜಪ ತಪ ವಿವಿಧ ವೈಭವೋಪೇತವಾದ ರಂಜನೆಯ ಪೂಜೆ ಪುನಸ್ಕಾರಗಳನ್ನು ಮಾಡಿದರು ಫಲ ಲಭಿಸದು, ದೇವರು ಕೂಡ ಮೆಚ್ಚುವುದಿಲ್ಲ. ಎಂದು ಬಸವಣ್ಣ ತಿಳಿಸಿದ್ದಾರೆ.ಈ ವಚನದ ಆಶಯವೇನೆಂದರೆ ಮಾನವ ಶರೀರವನ್ನು ಬಸವಣ್ಣನವರು ಸರ್ಪ ವಾಸವಾಗಿರುವ ಒಂದು ಹುತ್ತಕ್ಕೆ ಹೋಲಿಕೆ ಮಾಡಿದ್ದಾರೆ.ಮಾನವ ಶರೀರದಲ್ಲಿರುವ ಕಾಮ, ಕ್ರೋಧ, ಲೋಭ,ಮೋಹ, ಮದ, ಮತ್ಸರಾದಿ ಅರಿಶಡ್ವರ್ಗಗಳೇ ಕಾಳೋಗರ ಸರ್ಪಗಳು ಇವುಗಳನ್ನು ಮಾನವ ನಾಶಗೊಳಸಿ ಗೆಲ್ಲಬೇಕಾದರೆ ದೇಹದಂಡನೆ ಮಾಡಬೇಕು, ಆಧ್ಯಾತ್ಮದ ಸಾಧನೆ ಮಾಡಬೇಕು, ಆತ್ಮಶುದ್ಧಿ, ಅಂತರಂಗ ಶುದ್ಧಿ ಭಾವ ಶುದ್ಧಿ ಭಕ್ತಿಯಿಂದ ಸಾಧನೆ ಮಾಡಬೇಕು ಸಮಾಜ ಮುಖಿಯಾದ, ಲೋಕಹಿತವಾದ ಸಾಧನೆಗಳಿಂದ ಮಾತ್ರ ಗೆಲ್ಲಲು ಸಾಧ್ಯವಾಗುವುದು, ಮಾನವ ತನ್ನಲ್ಲಿರುವ ಮಮಕಾರಗಳನ್ನು ತೊರೆದು ಸತ್ಯಶುದ್ಧ ಕಾಯಕದ ಮೂಲಕ ಅಹರ್ನಿಸಿ ದುಡಿಯಬೇಕು, ಆಗ ಮಾತ್ರ ಅವನು ನಿಜವಾದ ಮಾನವನಾಗಲು ಸಾಧ್ಯವೆಂದು ಬಸವಣ್ಣನವರ ಅನಿಸಿಕೆಯಾಗಿದೆ
-ಚಿಕ್ಕೊಳ್ ಈಶ್ವರಪ್ಪ, ಹಿರೇಕೊಗಲೂರು,