ರಾಯಚೂರು.ಅ.೩೦- ವಚನ ವಿಜಯೋತ್ಸವ ದಿನಾಚರಣೆಯ ಅಂಗವಾಗಿ ಶರಣ ಹರಳಯ್ಯ – ಮಧುವರಸರ ಹಾಗೂ ಶರಣೆ ಗಂಗಾಬಿಕೆಯವರ ಪುಣ್ಯ ಸ್ಮರಣೆಯನ್ನು ನಿನ್ನೆ ನಗರದ ಬಸವ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.
ಶರಣೆ ಸುಮಂಗಲಾಸ್ವಾಮಿ ಹಿರೇಮಠವರು ಮಾತನಾಡಿ, ೧೨ ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಬಸವಣ್ಣನವರು ನಡೆಸಿದ ಧರ್ಮ ಕ್ರಾಂತಿಯಲ್ಲಿ ಸಮಾನತೆ ತತ್ವವನ್ನು ಬೋಧಿಸುವದರೊಂದಿಗೆ ನುಡಿದಂತೆ ನಡೆದದ್ದು ವಿಶ್ವಕ್ಕೆ ಮಾದರಿ. ಜ್ಯಾತಿ ವರ್ಣ ಸಂಕೋಲೆಗಳನ್ನು ಕಿತ್ತೆಸೆದು. ಲಿಂಗಾಯತ ಧರ್ಮ ಸ್ವೀಕರಿಸಿದ ಬ್ರಾಹ್ಮಣ ಕುಲದ ಮಧುವರಸರು ತಮ್ಮ ಮಗಳು ಲಾವಣ್ಯಳನ್ನು ಹರಳಯ್ಯನವರ (ಲಿಂಗವಂತ ಧರ್ಮ ಸ್ವೀಕರಿಸಿದ್ದರು) ಮಗ ಶೀಲವಂತನೊಂದಿಗೆ ವಿವಾಹ ಮಾಡಿಸಿದ ಕಾರಣಕ್ಕಾಗಿ ಕಲ್ಯಾಣ ಕ್ರಾಂತಿಗೆ ನಾಂದಿಯಾಯಿತು. ಇದರಿಂದ ಅಣ್ಣ ಬಸವಣ್ಣನವರಿಗೆ ಗಡಿಪಾರು ಶಿಕ್ಷೆಯಾಯಿತು. ಹರಳಯ್ಯ – ಮಧುವರಸರಿಗೆ ಮರದಂಡನೆ ವಿಧಿಸಿದರು. ಇದರಿಂದ ಕಲ್ಯಾಣ ಕ್ರಾಂತಿ ಪ್ರಾರಂಭವಾಯಿತು ಎಂದು ತಿಳಿಸಿದರು.
ಬಿಜ್ಜಳನ ಸೈನಿಕರು ಶರಣರ ಹತ್ಯೆ ಮಾಡುವದರೊಂದಿಗೆ ಶರಣರು ರಚಿಸಿದ ವಚನ ಕಟ್ಟುಗಳನ್ನು ಸುಡತೊಡಗಿದರು. ಈ ಕ್ರಾಂತಿಯನ್ನು ಸವಾಲಾಗಿ ಸ್ವೀಕರಿಸಿದ ಶರಣರು ಸೈನಿಕರೊಂದಿಗೆ ಹೋರಾಡಿ ವಚನ ಕಟ್ಟುಗಳನ್ನು ರಕ್ಷಿಸಿದರು. ಇದುವೇ ವಚನ ವಿಜಯೋತ್ಸವವೆಂದರು.
ಮಲ್ಲಿಕಾರ್ಜುನ ಗುಡಿಮನಿ ಮಾತನಾಡಿ, ಗಂಗಾoಬಿಕೆ ವಚನ ಸಾಹಿತ್ಯ ಉಳಿವಿಗಾಗಿ ಸೈನಿಕರೊಂದಿಗೆ ಹೋರಾಡಿ ಹುತಾತ್ಮರಾದರು. ಅವರ ಸ್ಮಾರಕ ಎಂ.ಕೆ.ಹುಬ್ಬಳ್ಳಿ ನದಿ ದಂಡೆಯ ಮೇಲಿರುವದನ್ನು ನಾವು ನೋಡಬಹುದೆಂದರು. ಅಧ್ಯಕ್ಷತೆ ವಹಿಸಿದ ರಾಚನಗೌಡ ಕೋಳೂರ ವರು ಶರಣರು ತ್ಯಾಗ, ಬಲಿದಾನ ಮಾಡಿ ವಚನ ಸಾಹಿತ್ಯವನ್ನು ಮುಂದಿನ ಸಮಾಜದ ಉಜ್ವಲ ಭವಿಷ್ಯತ್ತಿಗಾಗಿ ಕೊಟ್ಟು ಹೋಗಿದ್ದು, ಇವುಗಳನ್ನು ರಕ್ಷಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ಕಾರಣ ತಾವುಗಳು ಪ್ರತಿ ರವಿವಾರ ತಪ್ಪದೇ ಬಸವ ಕೇಂದ್ರಕ್ಕೆ ಬಂದು, ಶರಣರ ತತ್ವಗಳನ್ನು ಅಧ್ಯಯನ ಮಾಡಿ, ಶರಣ ಮಾರ್ಗದಲ್ಲಿ ನಡೆಯಬೇಕೆಂದರು. ವಿಜಯಕುಮಾರ್ ಸಜ್ಜನ, ವೆಂಕಣ್ಣ ಆಶಾಪುರ, ಸುರೇಶ, ಬಿ, ಸರೋಜಮ್ಮ ಮಾಲಿಪಾಟೀಲ್, ಸುಮಂಗಲಾ ಪಾಟೀಲ್ ಉಪಸ್ಥಿತರಿದ್ದರು. ವಚನ ಪ್ರಾರ್ಥನೆ ನಾಗೇಶಪ್ಪ, ಎ.ಎಸ್.ಐ. ಹಾಗೂ ಜಗದೇವಿ ಚನ್ನಬಸವ ಸಾಧರಪಡಿಸಿದರು.
ಪಿ. ಸೋಮಶೇಖರ್ ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಿದರು. ವಿರೇಶ್ ಕಳ್ಳೊಳ್ಳಿ ವಂದಿಸಿದರು.