ವಚನ ಚಿಂತನ ಪ್ರವಚನ

ಗುಳೇದಗುಡ್ಡ ನ.24- ಶ್ರೀಜಗದ್ಗುರು ಗುರುಸಿದ್ದ ಪಟ್ಟದಾರ್ಯ ಮಹಾಸ್ವಾಮಿಗಳವರ 37ನೇ ವಾರ್ಷಿಕ ಪುಣ್ಯಾರಾಧನೆಯ ಅಂಗವಾಗಿ ಡಿ.8 ರವರೆಗೆ ವಚನ ಚಿಂತನ ಪ್ರವಚನ ಕಾರ್ಯಕ್ರಮವು ಪಟ್ಟಣದ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠ, ಪಟ್ಟಸಾಲಿ ನೇಕಾರ ಗುರುಪೀಠದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಶರಣ ಸಂಗಮ ಸ್ವಾಗತ ಸಮಿತಿ ಅಧ್ಯಕ್ಷ ವಿರುಪಾಕ್ಷಪ್ಪ ಅರುಟಗಿ ಹೇಳಿದರು.
ಅವರು ಪಟ್ಟಣದ ಪ್ರತಿಷ್ಠಿತ ಶ್ರೀ ಗುರುಸಿದ್ದೇಶ್ವರ ಬೃಹನ್ಮಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿದಿನ ಸಂಜೆ 6.30 ರಿಂದ 8.30 ರವರೆಗೆ ನಡೆಯುವ ವಚನ ಚಿಂತನ ಪ್ರವಚನ ಕಾರ್ಯಕ್ರಮದಲ್ಲಿ ಪ.ಪೂ. ಶ್ರೀಗುರುಬಸವ ದೇವರು ಅವರು ಪ್ರವಚನ ಸಾದರಪಡಿಸುವರು. ಶ್ರೀಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಪ್ರವಚನ ಕಾರ್ಯಕ್ರಮ ಜರುಗುವುದು. ಇಳಕಲ್ಲದ ಶ್ರೀಗುರುಮಹಾಂತ ಮಹಾಸ್ವಾಮಿಗಳು, ಶಿರೂರಿನ ಡಾ.ಬಸವಲಿಂಗ ಮಹಾಸ್ವಾಮಿಗಳು, ಒಪ್ಪತ್ತೇಶ್ವರಮಠದ ಶ್ರೀಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಮುರುಘಾಮಠದ ಶ್ರೀಕಾಶೀನಾಥ ಮಹಾಸ್ವಾಮಿಗಳು, ಕಮತಗಿ-ಕೋಟೆಕಲ್ಲ ಶ್ರೀ ಹೊಳೆಹುಚ್ಚೇಶ್ವರ ಮಹಾಸ್ವಾಮಿಗಳು, ಮರಡಿಮಠದ ಶ್ರೀಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯರು, ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಮಹಾಸ್ವಾಮಿಗಳು ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸುವರು.
ಎಂದರು.
ಶ್ರೀ ಜಗದ್ಗುರು ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳವರು ಮಾತನಾಡಿ, ಶರಣ ಸಂಗಮ ಸಮಾರಂಭವು ಮಾನವೀಯ ಮೌಲ್ಯಗಳನ್ನು ಬಿತ್ತರಿಸುವ ಭಾವೈಕ್ಯತಾ ಸಮಾರಂಭವಾಗಿದ್ದು, ನಾವೆಲ್ಲರೂ ಒಂದು ಎಂಬ ಭಾವನೆ ಮೂಡಿಸುವುದು ಶರಣ ಸಂಗಮದ ಉದ್ದೇಶವಾಗಿದೆ. ಈ ಸಮಾರಂಭ ಸಾಮಾಜಿಕ, ಸಾಮರಸ್ಯ ಭಾವೈಕ್ಯತೆಯನ್ನು ಬೆಳೆಸುತ್ತದೆ. ಪ್ರತಿ ವರ್ಷ ಶರಣ ಧ್ವಜಾರೋಹಣವು ನಾನಾ ಧರ್ಮ ಜಾತಿ, ಮತ ಪಂಥಗಳಿಂದ ನಡೆಯುತ್ತದೆ. ಅರ್ಥಪೂರ್ಣ ಚಿಂತನೆಯ ವಿಶೇಷ ಕಾರ್ಯಕ್ರಮಗಳಲ್ಲಿ ನಾಡಿನ ಮಠಾಧೀಶರು, ಜನಪ್ರತಿನಿಧಿಗಳು, ಬುದ್ಧೀಜೀವಿಗಳು, ಚಿಂತಕರು, ವಿದ್ವಾಂಸರು ಭಾಗವಹಿಸಲಿದ್ದಾರೆ. ಈ ಸಮಾರಂಭದ ಅಂಗವಾಗಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಮತ್ತು ನೇತ್ರ ತಪಾಸಣಾ, ಔಷಧ ವಿತರಣಾ ಶಿಬಿರ, ಉಚಿತ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಸವರಾಜ ಶ್ರೀಗಳು ಹೇಳಿದರು.
ಪ.ಪೂ. ಶ್ರೀ ಗುರುಬಸವ ದೇವರು ಮಾತನಾಡಿ, ಡಿ.16 ರಂದು ಕತೃ ಜಗದ್ಗುರುಗಳವರ ರಜತಮೂರ್ತಿ ಹಾಗೂ ವಚನ ಕಟ್ಟುಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಸಕಲ ರಾಜಮರ್ಯಾದೆಗಳೊಂದಿಗೆ ವಿವಿಧ ಜಾನಪದ ಕಲಾ ತಂಡಗಳು ಹಾಗೂ ಹಲವಾರು ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ಜರುಗುವುದಲ್ಲದೇ ಅಂದು ಮಧ್ಯಾಹ್ನ ಮಹಾಪ್ರಸಾದ ವಿನಿಯೋಗ, ಸಮಾರಂಭದಲ್ಲಿ ಸ್ಫರ್ಧಾವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪುರಸ್ಕಾರ, ದಾನಿಗಳಿಗೆ ಮತ್ತು ಸಾಧಕರಿಗೆ ಸನ್ಮಾನವನ್ನು ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ, ಕಾರಣ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಶ್ರೀ ಗುರುಬಸವ ದೇವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕ ನೇಕಾರ ಸಮುದಾಯಗಳ ಉಪಾಧ್ಯಕ್ಷ, ಮುಖಂಡ ವಿಷ್ಣು ಬಳಿಗೇರಿ, ಮಹಾಲಿಂಗಪ್ಪ ಕರನಂದಿ, ನಾಗೇಶಪ್ಪ ಪಾಗಿ, ಶಿವಾನಂದ ಜವಳಿ, ತಮ್ಮಣ್ಣೆಪ್ಪ ಬೆನಕಟ್ಟಿ, ಈರಣ್ಣ ಶೇಖಾ, ಸೋಮಶೇಖರ ಕಲಬುರ್ಗಿ ಮತ್ತಿತರರಿದ್ದರು.