ವಚನಾನಂದ ಶ್ರೀಗಳಿಂದ ತುಂಗಭದ್ರಾ ಮಡಿಲು ಸ್ಚಚ್ಚತೆ

ದಾವಣಗೆರೆ.ಜ.೩; ನದಿಗಳು ದೇಶದ ಜೀವನಾಡಿಗಳು. ದೇಶದ ನೆಲ ಮತ್ತು ಜೀವಸಂಕುಲ ನದಿಗಳನ್ನ ನಂಬಿಯೇ ಉಸಿರಾಡುತ್ತಿದೆ. ಹೇಗೆ ದೇಹದಲ್ಲಿ ನರನಾಡಿಗಳಿವೆಯೋ ಹಾಗೆ ದೇಶದಲ್ಲಿ ನದಿಗಳು. ಅವುಗಳನ್ನು ಸ್ವಚ್ಛವಾಗಿ ಇಟ್ಟರೆ ದೇಹವೂ ಆರೋಗ್ಯ, ದೇಶವೂ ಆರೋಗ್ಯ ಎಂದು ಹರಿಹರ ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.ಹರಿಹರ ತುಂಗಭದ್ರಾ ನದಿ ದಂಡೆಯಲ್ಲಿ ಸ್ವಚ್ಚತಾ ಅಭಿಯಾನ ಕೈಗೊಂಡು ಮಾತನಾಡಿದ ಅವರು ಮೋದಿ ಜೀ ಅತ್ಯಂತ ಮಹತ್ವದ ನಮಾಮಿ ಗಂಗಾ ಯೋಜನೆಯನ್ನು ಆರಂಭಿಸಿದ್ದು. ಗಂಗೆ ಈಗ ಹಿಂದಿಗಿಂತ ಹೆಚ್ಚು ಪವಿತ್ರವಾಗಿ ಹರಿಯುತ್ತಿದ್ದಾಳೆ. 
ಗಂಗೆಯಂತೆ ತುಂಗಭದ್ರಾ ನದಿಯನ್ನೂ ಏಕೆ ಸ್ವಚ್ಛ ಗೊಳಿಸಬಾರದು ಅನ್ನುವ ಯೋಚನೆ ನಮಗೆ ಬಂದಿತ್ತು. ಊರು ನನ್ನದಾದ ಮೇಲೆ ನದಿ ನನ್ನದಾದ‌ ಮೇಲೆ ಅದನ್ನು ಸಂರಕ್ಷಿಸುವ, ಕಾಯಿಲೆ ಬಿದ್ದಾಗ ಗುಣಪಡಿಸುವ ಹೊಣೆಯೂ ನಮ್ಮದೇ ಅಲ್ಲವೇ!  ಹಾಗಾಗಿ ನಮ್ಮ ನೇತೃತ್ವದಲ್ಲಿ ಸ್ಥಳೀಯ ಪರಿಸರ ಸಂಘಟನೆ ನನ್ನ ಊರು ನನ್ನ ಹೊಣೆ ಜೊತೆ ಸೇರಿ ತುಂಗೆಯನ್ನು ಸ್ಚಚ್ಛಗೊಳಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಎರಡು ವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಠದ ನೂರಾರು ಭಕ್ತರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಪುಣ್ಯಸ್ನಾನಕ್ಕೆ ಸಹಸ್ರಾರು ಭಕ್ತರು ಭೇಟಿ  ನೀಡುವುದರಿಂದ ಹಾಗೂ ನದಿ ತಟದಲ್ಲಿಯೇ ಹಬ್ಬದೂಟ ಮಾಡಿ ಸವಿಯುವುದರಿಂದ ಗಂಗೆ ತಟದ ಸ್ವಚ್ಛತಾ ಕಾರ್ಯಕ್ರಮ ಹೆಚ್ಚು ಮಹತ್ವ ಪಡೆದುಕೊಂಡಿತು. 
ನಮ್ಮನ್ನು ಪೋಷಿಸಿರುವ ಪರಿಸರವನ್ನು ಯಾವತ್ತೂ ಮಲಿನ ಗೊಳಿಸಬಾರದು. ಪ್ರಮುಖವಾಗಿ ಜೀವ ನದಿಗಳು. ಅವು ಉಸಿರು ನೀಡುತ್ತವೆ. ಹಸಿರು ನೀಡುತ್ತವೆ. ಅನ್ನ ನೀಡುತ್ತವೆ.  ಗೊತ್ತಿರಲಿ ಸ್ವಚ್ಛ ಪರಿಸರ ಸ್ವಚ್ಛ ಭಾರತದ ಸಂಕೇತ. ನಮ್ಮೆಲ್ಲರ ಪರಿಶ್ರಮದಿಂದ ತುಂಗೆ ಗಂಗೆಯಂತೆ ಈಗ ಹೆಚ್ಚು ಪವಿತ್ರವಾಗಿ ಹರಿಯುತ್ತಿದ್ದಾಳೆ ಎನ್ನಲು ನಮಗೆ ಸಂತೋಷವಾಗುತ್ತಿದೆ ಎಂದರು. ಸ್ವಚ್ಛತಾ ಕಾರ್ಯದಲ್ಲಿ  ಪೌರಾಯುಕ್ತ ಉದಯಕುಮಾರ್ ಬಿ ತಳವಾರ, ಎಸ್ ಎಸ್ ಬಿರಾದಾರ, ಪರಿಸರ ಪ್ರೇಮಿ ರಾಘವೇಂದ್ರ ರವಿಶಂಕರ್ ಗದ್ಗಿಮಠ, ಮಂಜುನಾಥ್ .ನಗರಸಭೆಯ ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿಕರು, ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಯವರು, ನನ್ನ ಊರು ನನ್ನ ಹೊಣೆ ಬಳಗದ ಸರ್ವ ಸದಸ್ಯರು, ಪರಿಸರ ಪ್ರೇಮಿಗಳು, ತುಂಗಭದ್ರಾ ಮಡಿಲ ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು