ವಚನಗಳ ಅಳವಡಿಕೆಯಿಂದ ಬದುಕು ಸುಂದರ

ಕಲಬುರಗಿ:ಜ.14: ಬಸವಾದಿ ಶರಣರು ಅಮೋಘವಾದ ಸಮಾಜಮುಖಿ ಕಾರ್ಯಗಳನ್ನು ಮಾಡಿ, ತಮ್ಮ ಅನುಭವದ ಅಮೃತವನ್ನು ಒಳಗೊಂಡಿರುವ ವಚನಗಳನ್ನು ರಚಿಸಿದ್ದಾರೆ. ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಜ್ಞಾನ, ಮೌಢ್ಯತೆ, ಕಂದಾಚಾರ, ಅಂಧಶೃದ್ಧೆ, ಅಧಿಕಾರದ, ಹಣ, ಸಂಪತ್ತಿನ ಮದ, ಜಾತೀಯತೆ ಸೇರಿದಂತೆ ಮುಂತಾದ ಪಿಡುಗುಗಳು ನಿರ್ಮೂಲನೆಯಾಗಿ ಮನದ ಆಂತರಿಕ ಕತ್ತಲೆ ದೂರವಾಗಿ, ಬದುಕು ಸುಂದರ, ನೆಮ್ಮದಿ, ಶಾಂತಿಯಿದರಲು ವಚನಗಳು ಪ್ರೇರಣೆ ನೀಡುತ್ತವೆ ಎಂದು ಎಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಸ್ವಾತಿ ಪ್ರೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ವಚನ ಸಂಕ್ರಾಂತಿ’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಶರಣರ ವಚನಗಳ ಪುಸ್ತಕಗಳನ್ನು ವಿತರಸಿ ಅವರು ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಜರುಗಿದ ವಚನ ಚಳುವಳಿಯ ಜಗತ್ತಿನ ದೊಡ್ಡ ಸಾಮಾಜಿಕ ಚಳುವಳಿಯಾಗಿದೆ. ವಚನಗಳಲ್ಲಿ ಪ್ರತಿಯೊಂದು ಸಮಸ್ಯೆಗೆ ಪರಿಹಾರ ದೊರಕುತ್ತದೆ. ಅವುಗಳನ್ನು ಅಧ್ಯಯನ ಮಾಡಬೇಕು. ಒಬ್ಬ ವ್ಯಕ್ತಿಯ ಜೀವನದ ದಿಕ್ಕನ್ನೇ ಬದಲಿಸುವ ಶಕ್ತಿ ವಚನಗಳಿದೆ. ಅವುಗಳು ಸಾಧನೆಯ ದಾರಿಯನ್ನು ತಿಳಿಸುವ ಮೂಲಕ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣ ಮಾಡುವ ಸಾಧನಗಳಾಗಿವೆ. ನಾವು ಹೆಚ್ಚು ಓದಿದಷ್ಟು ನಮ್ಮ ಅರಿವು ಮತ್ತು ಜ್ಞಾನದ ವ್ಯಾಪ್ತಿ ಹೆಚ್ಚಾಗುತ್ತದೆ. ಹೆಚ್ಚಿನ ಅಧ್ಯಯನದಿಂದ ವ್ಯಕ್ತಿಯು, ಶಕ್ತಿಯಾಗುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಚನ್ನಬಸಪ್ಪ ಗಾರಂಪಳ್ಳಿ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಪರಮೇಶ್ವರ ಬಿ.ದೇಸಾಯಿ, ಶಿವಯೋಗೆಪ್ಪಾ ಎಸ್.ಬಿರಾದಾರ, ಅಸ್ಲಾಂ ಶೇಖ್, ಸುಲೇಮಾನ ಶೇಖ್, ಅದಿತಿ ಸಿ.ಗಾರಂಪಳ್ಳಿ, ಆದಿತ್ಯ ಸಿ.ಗಾರಂಪಳ್ಳಿ ಸೇರಿದಂತೆ ಇನ್ನಿತರರಿದ್ದರು.