ವಚನಗಳ ಅಧ್ಯಯನಕ್ಕೆ ಸಲಹೆ

ತುಮಕೂರು, ಜು. ೨೬- ೧೨ನೇ ಶತಮಾನದಲ್ಲಿ ಬಸವಣ್ಣನವರು ವಿಶ್ವಜ್ಯೋತಿಯಾಗಿ ಬೆಳಗಿದವರು. ಅವರ ಅತ್ಯಂತ ಆಪ್ತವಲಯದಲ್ಲಿ ದಿನನಿತ್ಯ ಎಡಬಿಡದೇ ಸೇವೆಗೈದ ನಿಜ ಶರಣರೆಂದರೆ ಶರಣ ಶ್ರೇಷ್ಠ ಹಡಪದ ಅಪ್ಪಣ್ಣನವರು ಎಂದು ಸಾಹಿತಿ ಬ್ಯಾಡನೂರು ನಾಗಭೂಷಣ್ ಹೇಳಿದರು.
ಜಿಲ್ಲಾ ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ನಗರದ ಪರಂಜ್ಯೋತಿ ಸಭಾಂಗಣದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಹಾಗೂ ತಾಲ್ಲೂಕು ಕಾರ್ಯಕಾರಿ ಸಮಿತಿಯವರ ಪದ ಸ್ವೀಕಾರ ಸಮಾರಂಭದಲ್ಲಿ ಅಪ್ಪಣ್ಣನವರನ್ನು ಕುರಿತು ಮಾತನಾಡಿದರು.
ಅನುಭವಮಂಟಪದ ಮಹಾನುಭಾವಿ ‘ನಿಜಸುಖಿ ಅಪ್ಪಣ್ಣ’ ಎಂದು ಅಣ್ಣನವರಿಂದಲೇ ಕರೆಯಿಸಿಕೊಂಡ ಶರಣರು ಇವರು. ಬಸವಣ್ಣನವರಿಗೆ ಹಾಗೂ ಎಲ್ಲ ಶರಣರಿಗೂ ದಾಸೋಹದ ನಂತರ ತಾಂಬೂಲ ಸೇವೆ ಮಾಡುತ್ತಾ ಹಾಗೂ ಲಿಂಗದಾರಿ ಶರಣರೆಲ್ಲರ ಸೇವೆಗೈದ ನಿಜಶರಣರು ಎಂದರು.
೧೧೬೦ ಇವರ ಕಾಲ. ‘ಬಸವ ಪ್ರಿಯ ಕೂಡಲ ಚೆನ್ನಬಸವಣ್ಣ’ ಎಂಬ ಅಂಕಿತನಾಮದಲ್ಲಿ ಸುಮಾರು ೨೫೦ ವಚನಗಳನ್ನು ರಚಿಸಿದ್ದಾರೆ. ಕೊನೆಗೆ ಇವರು ತಂಗಡಗಿಯಲ್ಲಿ ಐಕ್ಯರಾದರು. ಇವರ ಆದರ್ಶಪತ್ನಿ ‘ನಿಜಮುಕ್ತೆ ಹಡಪದ ಲಿಂಗಮ್ಮ. ಇವರೂ ವಚನ ರಚಿಸಿದ್ದಾರೆ ಎಂದರು.
ಲಿಂಗವಂತ ಧರ್ಮದ ಷಟ್ಸ್ಥಲ, ಪಂಚಾಚಾರ, ಅಷ್ಟಾವರಣಗಳ ಬಗ್ಗೆ ಸರಳವಾಗಿ ತಿಳಿಸಿದರು. ಅಪ್ಪಣ್ಣನವರ ವಚನಗಳನ್ನು ಯುವಪೀಳಿಗೆ ಅಧ್ಯಯನ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ರಾಜಣ್ಣ ಮಾತನಾಡಿ, ಜಾತಿ, ಮತ, ಧರ್ಮ ಎಂದೆಣಿಸದೆ ಯುವಕರು ವಚನ ಸಾಹಿತ್ಯ ಓದಬೇಕು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಗ್ರಾಮೀಣರಲ್ಲಿ ಬಿತ್ತಬೇಕು ಎಂದರು.
ಇದೇ ಸಂದರ್ಭದಲ್ಲಿ ಪರಂಜ್ಯೋತಿ ಮಂಟಪದ ವತಿಯಿಂದ ಬ್ಯಾಡನೂರು ನಾಗಭೂಷಣ್ ಹಾಗೂ ಕಾಯಕ ಜೀವಿ ಶ್ರೀನಿವಾಸ್ ರವರನ್ನು ಸನ್ಮಾನಿಸಲಾಯಿತು.