ವಚನಗಳೆಂದರೆ ಶರಣರ ಆತ್ಮಕತೆಗಳು

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೨೦: ವಚನಗಳೆಂದರೆ ಶರಣರ ಆತ್ಮಕತೆಗಳು. ಅವರು ತಮ್ಮ ಐಹಿಕ ಮತ್ತು ಪಾರಮಾರ್ಥಿಕ ಬದುಕಿನ ಎಲ್ಲ ಸಂಗತಿಗಳನ್ನೂ ವಚನಗಳ ಮೂಲಕ ಅಭಿವ್ಯಕ್ತಗೊಳಿಸಿದರು. ಅವರು ಬದುಕಿನಲ್ಲಿ ಕಂಡುಂಡ ನಿಂದೆ ನೋವು ಶಾಂತಿ ಸಮಾಧಾನಗಳೆಲ್ಲ ವಚನಗಳಲ್ಲಿ ಅಭಿವ್ಯಕ್ತಿಗೊಂಡಿವೆ. ಅವುಗಳನ್ನು ಸಮಾದಾನಚಿತ್ತದಿಂದ ಸ್ವೀಕರಿಸಲು ಅನುಸರಿಸಿದ ಬಗೆಯೂ ವಚನಗಳಲ್ಲಿ ದಾಖಲಾಗಿದೆ. ಈ ಕಾರಣದಿಂದ ವಚನಗಳು ಎಂದೆಂದಿಗೂ ಪ್ರಸ್ತುತವೆಂದುಚಿಕ್ಕಮಗಳೂರು ಬಸವತತ್ವಪೀಠದ ಪೂಜ್ಯಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು. ನಗರದ ವೆಂಕಭೋವಿ ಕಾಲೋನಿಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿಗುರುಪೀಠ ದಾವಣಗೆರೆ ಶಾಖಾಮಠದ ಆವರಣದಲ್ಲಿ ಜರುಗಿದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 61ನೇ ರಥೋತ್ಸವ ಪ್ರಯುಕ್ತ ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ವಚನಾಭೀಷೇಕ  ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ಜನ ಭಾಷೆಯಲ್ಲಿ ಧರ್ಮ, ಅಧ್ಯಾತ್ಮ, ಜೀವನ ಮೌಲ್ಯಗಳನ್ನು ವಚನಗಳಲ್ಲಿ ತಿಳಿಸಿ ಕನ್ನಡದ ಘನತೆಯನ್ನು ಎತ್ತರಿಸಿದವರು ಬಸವಾದಿ ಪ್ರಮಥರು. ವಚನಗಳು ಶುಷ್ಕ ಬೋಧನೆಗಳಲ್ಲ. ಕರ್ತಾರನ ಕಮ್ಮಟವಾದ ಈ ಮರ್ತ್ಯದ ಬದುಕಿನ ಕಡಿಹಕ್ಕೆ ಬಡಿಹಕ್ಕೆ ಒಳಗಾಗಿ ಬೆಳಗಿದ ಜೋತಿರ್ಲಿಂಗಗಳು. ಅವುಗಳ ಅನುಸಂಧಾನ ಬದುಕಿನ ಎಲ್ಲ ಅಂಧಕಾರಗಳನ್ನು ಹೊಡೆದೋಡಿಸಿಬಿಡುತ್ತದೆ.ಸೌಜನ್ಯದ ವರ್ತನೆ, ದಯಾರ್ದ್ರತೆ, ವಿನಯ, ಸಾಂತ್ವನ, ಪ್ರತಿಭಟನೆ, ಪಾರಮಾರ್ಥ ಇವೇ ಮೊದಲಾದ ಮೌಲ್ಯಗಳು ವಚನಗಳಲ್ಲಿ ಹೇರಳವಾಗಿವೆ. ಈ ವಚನಗಳನ್ನು ಓದುವುದನ್ನು ಮನನ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ ವಚನಗಳಲ್ಲಿ ಸಮಾಜ ವ್ಯವಸ್ಥೆಯ ಗೊಡ್ಡುತನವನ್ನು, ಹುಸಿ ನಂಬಿಕೆಗಳನ್ನು, ಹೇಯ ಆಚರಣೆಗಳನ್ನು, ಶತಮಾನಗಳ ಭಯ-ಭ್ರಮೆಗಳನ್ನು ಬಯಲು ಮಾಡಿವೆ. ಸಮಾಜದ ವಿಮರ್ಶೆಗೆ ಸಂಬಂಧಿಸಿದ ವಚನಗಳಲ್ಲಿ ಎರಡು ರೀತಿಯ ವೈಶಿಷ್ಟ್ಯತೆ ಇದೆ. ಒಂದು ಮೌಢ್ಯ ಸಂಪ್ರದಾಯಗಳನ್ನು ತಿರಸ್ಕರಿಸಿದರೆ, ಮತ್ತೊಂದು ಬದುಕಿನ ಸತ್ಯದರ್ಶನ ಮಾಡಿಕೊಡುತ್ತದೆ. ಹಳೆಯದನ್ನೂ ದುರಾಚರಣೆಯನ್ನೂ ತಿರಸ್ಕರಿಸುತ್ತಲೇ, ಹೊಸದಕ್ಕೆ-ವಾಸ್ತವ ಬದುಕಿಗೆ ಬೆಲೆಕಟ್ಟಿಕೊಡುವುದರಿಂದ ವಚನಗಳು ಇಂದಿಗೂ ಪ್ರಸ್ತುತವಾಗುತ್ತವೆ.ಸಮಾಜ ವ್ಯವಸ್ಥೆಯಲ್ಲಿ ಬೇರೂರಿದ ಮೌಢ್ಯತೆ ಅಂಧಾನುಕರಣೆಗಳು ಮತ್ತು ಅವುಗಳನ್ನೆಲ್ಲಾ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಸೋಗನ್ನೂ ವಚನಗಳು ಬಯಲು ಮಾಡುತ್ತಾ ವಾಸ್ತವ ಬದುಕಿನ ಸತ್ಯದರ್ಶನವನ್ನೂ ತೋರಿಸಿರುವುದರಿಂದ ವಚನ ಸಾಹಿತ್ಯದ ಅನಿವಾರ್ಯತೆಯ ಅರಿವೂ ಮೂಡುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಭೋವಿ ಸಮಾಜದ ಮುಖಂಡರಾದ ಡಿ.ಬಸವರಾಜ, ಜಯಣ್ಣ, ವಕೀಲ ಗೋಪಾಲ, ನಾಗರಾಜ, ಮಂಜುನಾಥ, ಗಣೇಶ, ಕಿಟ್ಟಿ, ಮೂರ್ತ್ಯಪ್ಪ, ಶೇಖರಪ್ಪ ಹಾಗೂ ಮುಂತಾದವರು ಉಪಸ್ಥಿತಿಯಿದ್ದರು.