ವಚನಗಳು ಜೀವನ ವಿಧಾನವೂ ಹೌದು

ಸಂಜೆವಾಣಿ ನ್ಯೂಸ್
ಮೈಸೂರು : ಆ.14:- ವಚನಗಳು ಸಾಹಿತ್ಯ ಪ್ರಕಾರವೂ ಹೌದು ಜೀವನ ವಿಧಾನವೂ ಹೌದು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ ಕೃಷ್ಣಕುಮಾರ್ ಅಭಿಪ್ರಾಯಪಟ್ಟರು.
ವಿಜಯನಗರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಸಾಹಿತಿ ವೈ.ವಿ.ಯಶೋಧ ರಾಮಕೃಷ್ಣ ಅವರು ರಚಿಸಿರುವ ವಚನ ಜ್ಯೋತಿ ಆಧುನಿಕ ವಚನಗಳ ಸಂಕಲನ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನ ಕರ್ನಾಟಕ ಚರಿತ್ರೆಯಲ್ಲಿ ಒಂದು ಉಜ್ವಲ ಕಾಲ. ವಚನಗಳು ಮೀಸಲು ಕವಿತೆಯಾಗಿದ್ದು, ಅವು ಇಂದಿಗೂ ಮತ್ತು ಎಂದೆಂದಿಗೂ ಪ್ರಸ್ತುತ ಎಂದು ಹೇಳಿದರು.
ಹಿಂದಿನವರ ವಚನಗಳ ಪ್ರಭಾವಕ್ಕೆ ಒಳಗಾಗದೇ ಇಂದು ವಚನ ಸಾಹಿತ್ಯ ರಚಿಸಲು ಸಾಧ್ಯವಿಲ್ಲ. ಆಧುನಿಕ ವಚನಗಳು ಹಿಂದಿನ ವಚನಗಳಷ್ಟು ಮಹತ್ವದ್ದಾಗಿಲ್ಲ. ಯಶೋಧ ಅವರ ವಚನಗಳಲ್ಲಿ ಅರ್ಥನುಡಿ ಮತ್ತು ಸಮಾಜಮುಖಿ ಎಂಬ ಎರಡು ಬಗೆಯ ವಚನ ರಚಿಸಿದ್ದಾರೆ.
ಹಿಂದಿನ ವಚನಗಳು ಸ್ವಭಾವ ಮತ್ತು ಪ್ರಭಾವ ಒಳಗೊಂಡಿದ್ದವು. ಆಸೆಗೆ ದಾಸರಾಗದೆ ದೇವರಿಗೆ ದಾಸರಾಗಬೇಕು ಎಂಬದು ಸಮಾಜಮುಖಿ ವಚನವಾದರೆ, ಭಕ್ತಿ, ಸಮರ್ಪಣ ಮತ್ತು ನಿವೇದನಾ ಎಂಬದು ಅರ್ಥಮುಖಿಯಲ್ಲಿ ವಚನಗಳಾಗುತ್ತವೆ. ಆದ್ದರಿಂದ ಯಶೋಧ ಅವರು ಮತ್ತಷ್ಟು ಸಮಾಜಮುಖಿ ವಚನಗಳನ್ನು ರಚಿಸಲಿ ಎಂದು ಹಾರೈಸಿದರು.
ಕೃತಿ ಕುರಿತು ಪ್ರಾಧ್ಯಾಪಕ ಬೆಸೂರು ಮೋಹನ್ ಪಾಳೇಗಾರ್ ಮಾತನಾಡಿ, ಯಾಂತ್ರಿಕ ಬದುಕನ್ನು ಹಾರಿಸಿಕೊಂಡಿರುವ ಇಂದಿನ ಸಂದರ್ಭದಲ್ಲಿ ವಚನಗಳ ಅಗತ್ಯ ಮಹತ್ವ ಹೆಚ್ಚಿದೆ. ವಚನಗಳು ಹನ್ನೆರಡನೇ ಶತಮಾನದಲ್ಲಿ ಆರಂಭಗೊಂಡಿದ್ದರೂ ಇಂದಿಗೂ ತನ್ನ ಮಹತ್ವ ಉಳಿಸಿಕೊಂಡಿದೆ ಎಂದು ಹೇಳಿದರು.
ಸಮಾನತೆ, ಸಹೋದರತ್ವ ಮತ್ತು ಜಾತಿ ವಿನಾಶತೆ ವಚನಗಳ ಮೂಲ ಆಶಗಳಾಗಿದ್ದು, ಇವುಗಳನ್ನು ಒಪ್ಪದ ಆಧುನಿಕ ವಚನಗಳಿಗೆ ಜನ ಮಾರುಹೋಗಿದ್ದಾರೆ. ವಚನಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಆಚರಣೆಗೆ ತರಬೇಕಿದೆ. ವಚನ ಪಠಣ ಮಾಡಿದೆರೇ ಜಗತ್ತಿಗೆ ಜಾತಿ, ಹಣ, ರಾಜಕಾರಾಣದ ವ್ಯಾದಿ ಬರವುದಿಲ್ಲ. ಸಕಲ ಜೀವಾತಗಳಿಗೂ ಲೇಸನ್ನು ಭಯಸುವುದೇ ವಚನದ ಶಕ್ತಿ. ಆದ್ದರಿಂದಲೇ ಅವು ಇಂದಿಗೂ ಬಲಿಷ್ಠವಾಗಿ ಉಳಿದಿವೆ. ಯಾವುದೇ ಸಾಹಿತ್ಯ ಪ್ರಕಾರಗಳು ವಚನ ಸಾಹಿತ್ಯ ಎದುರು ನಿಲ್ಲಲಾರವು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಗೆರೆ ಗೋಪಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಎಂ.ಬಿ ಸಂತೋಷ್, ಸಾಹಿತಿ ವೈ.ವಿ ಯಶೋಧ ರಾಮಕೃಷ್ಣ, ಗೌರವ್ ಪ್ರಕಾಶಕ ಓಂಕಾರಪ್ಪ, ಕವಯತ್ರಿ ಎ.ಹೇಮಗಂಗ, ಶೋಭಾ ಬಿ. ಮುಂತಾದವರಿದ್ದರು.