ಕಲಬುರಗಿ:ಜೂ.29: 12ನೇ ಶತಮಾನದ ಬಸವಾದಿ ಶರಣರ ವಚನಗಳು ಇಂದಿನ ಜಗತ್ತಿಗೆ ಪರಿಚಯ ಆಗಬೇಕಾದರೆ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರು ನಿಜವಾದ ಕಾರಣೀಕರ್ತರು. ಒಂದು ವೇಳೆ ಹಳಕಟ್ಟಿ ಶರಣರು ಇರದಿದ್ದರೆ ನಮ್ಮ ಬಸವ ಪರಂಪರೆಯ ಶರಣ ಇತಿಹಾಸ ಇಂದು ಯಾರೊಬ್ಬರಿಗೂ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ವಚನಗಳಿಗೆ ಮರುಜೀವ ನೀಡಿದವರು ನಮ್ಮ ಹಳಕಟ್ಟಿ ಯವರು ಎಂಬ ಮಾತನ್ನು ಅಭಿಮಾನದಿಂದ ಹೇಳಲೇಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಬಿ.ಪಾಟೀಲ ಹೇಳಿದರು.
ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಹಾಗೂ ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಸಹಯೋಗದೊಂದಿಗೆ ನಗರದ ಕನ್ನಡ ಭವನದಲ್ಲಿ ಗುರುವಾರ ಹಮ್ಮಿಕೊಂಡ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಸ್ಮರಣೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಡಾ. ಶಿವಲಿಂಗಪ್ಪ ಗೌಳಿ, ಸಂಜೀವಕುಮಾರ ಡೊಂಗರಗಾಂವ, ದೇವೇಂದ್ರಪ್ಪ ಆವಂಟಿ, ಸುಖಮುನಿ ಗು ಬೈಚಬಾಳ, ಸುಮಿತ್ರಾ ಗುರುನಾಥ ಭಾವಿ ಅವರನ್ನು `ತವನಿಧಿ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ವಚನ ಪಿತಾಮಹ ಡಾ. ಫ ಗು ಹಳಕಟ್ಟಿ ಅವರು ತಮ್ಮ ಸ್ವಂತ ಮನೆಯನ್ನು ಮಾರಾಟ ಮಾಡಿ, ಶಿವನುಭವ ಎಂಬ ದಿನಪತ್ರಿಕೆಯನ್ನು ಹೊರತಂದು ಸುಮಾರು 250 ಕ್ಕೂ ಜನ ಶರಣರು ಮತ್ತು ಸಾವಿರಾರು ವಚನಗಳನ್ನು ನಾಡಿಗೆ ಪರಿಚಯಿಸಿದ್ದಾರೆ. ಹೀಗಾಗಿ ಹಳಕಟ್ಟಿ ಅವರ ಕೊಡುಗೆ ಅಮೋಘವಾಗಿದೆ ಎಂದು ಹೇಳಿದರು.
ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನದ ಕರ್ಯದರ್ಶಿ ವಿನೋದ ಜೇನವೇರಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಮನೆ, ಮಠ, ಜಗುಲಿಗಳಲ್ಲಿ ಪೂಜಿಸುತ್ತಿದ್ದ ತಾಡೋಲೆಗಳನ್ನು ಹುಡುಕಿ ತಂದು, ವಚನಗಳನ್ನು ಮುದ್ರಿಸಿದ ಕೀರ್ತಿ ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಯವರಿಗೆ ಸಲ್ಲುತ್ತದೆ. ಅವರ ಸ್ಮರಣೆ ನಮಗೆಲ್ಲರಿಗೂ ಪ್ರೇರಣೆಯಾಗುತ್ತದೆ ಎಂದರು.
ಜಿಲ್ಲಾ ನೇಕಾರ ವಕೀಲರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ, ಅಕಾಡೆಮಿ ಕಾರ್ಯಾಧ್ಯಕ್ಷ ಶಿವರಾಜ ಎಸ್ ಅಂಡಗಿ, ಪ್ರಮುಖರಾದ ಯಶ್ವಂತರಾಯ ಅಷ್ಠಗಿ, ರಾಜೇಂದ್ರ ಮಾಡಬೂಳ, ನಾಗಪ್ಪ ಎಂ. ಸಜ್ಜನ್, ಗುರುಬಸಪ್ಪ ಸಜ್ಜನಶೆಟ್ಟಿ, ಪ್ರಭುಲಿಂಗ ಮೂಲಗೆ, ವಿಶಾಲಾಕ್ಷಿ ಮಾಯಣ್ಣವರ್, ಮಲ್ಲಿಕಾರ್ಜುನ ಇಬ್ರಾಹಿಂಪೂರ, ಧರ್ಮಣ್ಣಾ ಹೆಚ್. ಧನ್ನಿ, ಅನಂತ ಗುಡಿ, ಎಸ್.ಕೆ.ಬಿರಾದಾರ, ಬಸ್ವಂತರಾಯ ಕೋಳಕೂರ, ಚಂದ್ರಶೇಖರ ಮ್ಯಾಳಗಿ, ಸಿದ್ಧಾರಾಮ ಹಂಚನಾಳ, ವಿಶ್ವನಾಥ ತೊಟ್ನಳ್ಳಿ, ಮಂಜುಳಾ ಸುತಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.