ವಚನಗಳಲ್ಲಿ ಜ್ಞಾನಾಮೃತದ ಸವಿಯಿದೆ: ಡಾ. ಜಯಶ್ರೀ ದಂಡೆ

ಕಲಬುರಗಿ,ನ.13: ತನುವೆಂಬ ಮನೆಯೊಳಗಿರುವ ಜ್ಞಾನಲಿಂಗವನ್ನು ಗೌರವಿಸಿ ಅದರ ಅಮೃತವನ್ನು ಸವಿದು ಓಲಾಡಬೇಕೆಂಬಂತಿರುವ ವಚನಗಳು ಬದುಕುವುದಕ್ಕೆ ಬೇಕು ಬದುಕುವ ಈ ಮಾತು ಎನ್ನುವಂತಿವೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ವಿಶ್ರಾಂತ ಪ್ರಾಧ್ಯಾಪಕಿ ಡಾ. ಜಯಶ್ರೀ ದಂಡೆ ಹೇಳಿದರು.
ಲಿಂ ಶರಣೆ ಪುಟ್ಟಮ್ಮ ಲಿಂ. ಶರಣ ಬಸವರಾಜಪ್ಪ ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ (ರಿ) ಮತ್ತು ಬಸವ ಬಳಗ (ರಿ) ದಾವಣಗೆರೆ ಹಾಗೂ ಕಲಬುರಗಿಯ ಬಸವ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಆಶ್ರಯದಲ್ಲಿ ನಗರದ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಶರಣತತ್ವ ಕಮ್ಮಟ ಸಮಾರೋಪ ಸಮಾರಂಭದಲ್ಲಿ ವಿಶೇಷ ಅನುಭಾವ ನೀಡಿದ ಅವರು, ಅಲ್ಲಮಪ್ರಭುಗಳು ಹೇಳುವಂತೆ ತನು, ಮನ, ಅಪ್ಯಾನ, ವಚನ ಈ ನಾಲ್ಕು ಗುಣಗಳ ಜೊತೆ ಬದುಕು ನಿರ್ವಹಣೆ ಆಗುತ್ತಿರುತ್ತದೆ. ಇವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಬದುಕು ಸುಂದರವಾಗುತ್ತದೆ ಎಂದು ತಿಳಿಸಿದರು.
ಬಸವ ಸಮಿತಿ ಕೇಂದ್ರ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ಬದುಕು ಹಾಗೂ ಬೋಧನೆ ಇಂದಿಗೂ ಪ್ರಸ್ತುತವಾಗಿದ್ದು, ಅದು ತನ್ನ ಗಟ್ಟಿತನದಿಂದ ಮುಂದಿನ ದಿನಗಳಿಗೂ ಪ್ರಸ್ತುತವೆನಿಸುತ್ತದೆ. ಬಸವ ಸಮಿತಿ ವತಿಯಿಂದ ವಚನಗಳ ಅನುವಾದ ಕಾರ್ಯ ಅಭೂತಪೂರ್ವವಾಗಿ ನಡೆದಿರುವ ಪರಿಣಾಮ ಬಸವತತ್ವ ಕಡಲಾಚೆಯ ದೇಶಗಳಿಗೂ ಪಸರಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ (ರಿ)ನ ಕಾರ್ಯಾಧ್ಯಕ್ಷ ಶಂಭುಲಿಂಗಪ್ಪ ಅಜ್ಜಂಪುರ ಶೆಟ್ರು ಅಧ್ಯಕ್ಷತೆ ವಹಿಸಿದ್ದರು. ಬಸವ ಸಮಿತಿ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ ಸಮ್ಮುಖ ವಹಿಸಿದ್ದರು. ದಾವಣಗೆರೆ ಬಸವ ಬಳಗದ ಶತಾಯುಷಿ ವಿ. ಸಿದ್ಧರಾಮಣ್ಣನವರು ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಯಾಗಿದ್ದ ರಾಷ್ಟ್ರೀಯ ಬಸವ ಸೇನೆಯ ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರ ಗುಡಾಸ್ ಮಾತನಾಡಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರ ಶಾಬಾದಿ, ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ, ಕಾಯಕ ಶರಣರ ಒಕ್ಕೂಟಗಳ ಜಿಲ್ಲಾಧ್ಯಕ್ಷ ಭೀಮಣ್ಣ ಬೋನಾಳ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ವೇದಿಕೆಯಲ್ಲಿದ್ದರು.
ಡಾ. ಕೆ.ಎಸ್. ವಾಲಿ ಸ್ವಾಗತಿಸಿದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿದರು. ಶಿಬಿರಾರ್ಥಿಗಳಾಗಿದ್ದ ಶರಣಬಸವ ಕಲ್ಲಾ, ಗುಣೇಶ ಬಾರತೀಯ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.


ರಾಜ್ಯದ ದಾವಣಗೆರೆ, ಬೆಂಗಳೂರು, ರಾಯಚೂರು, ಕೊಪ್ಪಳ, ಬೀದರ್, ಕಲಬುರಗಿ ಜಿಲ್ಲೆಗಳಲ್ಲದೆ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರಗಳಿಂದ ಆಗಮಿಸಿದ್ದ 1000ಕ್ಕೂ ಅಧಿಕ ಶರಣರು ಮೂರು ದಿನಗಳ ಕಾಲ ಆಯೋಜಿಸಿದ್ದ ಈ ಕಮ್ಮಟದಲ್ಲಿ ಭಾಗವಹಿಸಿರುವುದು ತುಂಬಾ ನೆಮ್ಮದಿಯ ವಿಷಯ. ಐ್ರಸ್ಟ್ ಆಶಯದಂತೆ ಬಸವತತ್ವಗಳ ಬಗ್ಗೆ ಚಿಂತನ ಮಂಥನ ನಡೆದಿರುವುದು ಸಮಜಕ್ಕೆ ಉಪಯುಕ್ತವೆನಿಸಿದೆ.
-ಶಂಭುಲಿಂಗಪ್ಪ ಅಜ್ಜಂಪುರ ಶೆಟ್ರು, ಕಾರ್ಯಾಧ್ಯಕ್ಷ, ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್, ದಾವಣಗೆರೆ