ವಚನಗಳಲ್ಲಿ ಜೀವನದ ಯಶಸ್ಸು ಅಡಗಿದೆ


ಲಕ್ಷ್ಮೇಶ್ವರ,ಜೂ.26: ಸಮಾಜವನ್ನು ಸರಿ ದಾರಿಗೆ ತರುವಲ್ಲಿ 12ನೇ ಶತಮಾನದ ಶರಣರ ಕೊಡುಗೆ ಬಹು ದೊಡ್ಡದು’ ಎಂದು ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಹೇಳಿದರು. ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ಲಕ್ಷ್ಮೇಶ್ವರ ತಾಲ್ಲೂಕಾ ಘಟಕ, ತಾಲ್ಲೂಕಾ ಕದಳಿ ಮಹಿಳಾ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಂಗಣದಲ್ಲಿ ಪರಿಷತ್ತಿನ ಲಕ್ಷ್ಮೇಶ್ವರ ತಾಲ್ಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ಕೇವಲ ಶರಣರ ವಚನಗಳನ್ನು ಹಾಡಿದರೆ ಸಾಲದು. ಅವರು ಹೇಳಿದಂತೆ ನಡೆದಾಗ ಶರಣರಿಗೆ ನಾವು ಬೆಲೆ ಕೊಟ್ಟಂತಾಗುತ್ತದೆ. ಮನುಷ್ಯ ಈ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಶರಣರು ವಚನಗಳ ಮೂಲಕ ಸಾರಿ ಸಾರಿ ಹೇಳಿದ್ದಾರೆ. ಅವರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ’ ಎಂದರು.
ಸಾನಿಧ್ಯ ವಹಿಸಿದ್ದ ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮೀಜಿ ಮಾತನಾಡಿ ‘ಇಂದಿನ ಶಾಲಾ ಮಕ್ಕಳಲ್ಲಿ ಶರಣರ ಜೀವನ, ಹೋರಾಟ, ತ್ಯಾಗಗಳ ಕುರಿತು ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಇದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ಪಠ್ಯಗಳಲ್ಲಿ ಶರಣರ ವಚನ, ಅವರ ಸಾಧನೆ ಕುರಿತು ತಿಳಿ ಹೇಳುವ ಪಠ್ಯಗಳನ್ನು ಅಳವಡಿಸುವ ಕೆಲಸ ಹೆಚ್ಚಾಗಿ ನಡೆಯಬೇಕಿದೆ. ವೇದ, ರಾಮಾಯಣ, ಮಹಾಭಾರತ ಏನೇ ಓದಿದರೂ ಸಹ ಅದರೊಂದಿಗೆ ಪ್ರತಿದಿನ ಒಂದು ವಚನ ಓದುವುದನ್ನು ಮರೆಯಬಾರದು’ ಎಂದ ಅವರು ‘ಕನ್ನಡ ಸಾಹಿತ್ಯಕ್ಕೆ ಶರಣ ಸಾಹಿತ್ಯದ ಕೊಡುಗೆ ಅಪಾರ. ಶರಣ ಬೆಡಗಿನ ವಚನಗಳಲ್ಲಿ ಮನುಷ್ಯ ಜೀವನದ ಯಶಸ್ಸು ಅಡಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಬಸಪ್ಪ ಕಂಠಿ ಮಾತನಾಡಿ ‘ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಲಕ್ಷ್ಮೇಶ್ವರದ ಘಟಕವೂ ಸಹ ಉತ್ತಮ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಶರಣ ಸಾಹಿತ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲಿ’ ಎಂದರು. ಸುಧಾ ಹುಚ್ಚಣ್ಣವರ ಉಪನ್ಯಾಸ ನೀಡಿದರು. ಡಿ.ಬಿ. ಬಳಿಗಾರ, ಕೆ.ಎ. ಬಳಿಗೇರ, ನಿರ್ಮಲಾ ಅರಳಿ, ಎಂ.ಕೆ. ಕಳ್ಳಿಮಠ ಇದ್ದರು. ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಎಸ್. ರಾಮಶೆಟ್ಟರ ನಿರೂಪಿಸಿದರು. ಮಾಲಾದೇವಿ ದಂಧರಗಿ ಪರಿಚಯ ಭಾಷಣ ಮಾಡಿದರು.