ವಕ್ಫ್ ಆಸ್ತಿ ರಕ್ಷಣೆಗಾಗಿ ಅನ್ವರ ಮಣಿಪ್ಪಾಡಿ ವರದಿ ಹೋರಾಟ ಸಮಿತಿ ಅಸ್ತಿತ್ವಕ್ಕೆ

ಯಾದಗಿರಿ;ಜ.9: ವಕ್ಫ್ ಕಮೀಟಿ ಆಸ್ತಿ ರಕ್ಷಣೆ ಮಾಡಲು ಅನ್ವರ ಮಣಿಪ್ಪಾಡಿ ವರದಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ತರಲಾಗಿದ್ದು, ರಾಜ್ಯಾದ್ಯಂತ ವಕ್ಫ್ ಆಸ್ಥಿ ರಕ್ಷಣೆ ಗಾಗಿ ಸಮಿತಿ ಕಾರ್ಯನಿರ್ವಹಿಸಲಿದೆ ಎಂದು ಸಮಿತಿಯ ಕಲ್ಯಾಣ ಕರ್ನಾಟಕ ವಿಭಾಗದ ಸಂಸ್ಥಾಪಕ ಅದ್ಯಕ್ಷ ಅರ್ಷದ್ ದಖನಿ ಪ್ರಕಟಿಸಿದರು.
ನಗರದ ವೀರಭಾರತಿ ಪ್ರತಿಷ್ಠಾನ ಕಚೇರಿ ಸಭಾಂಗಣದಲ್ಲಿ ಮಾದ್ಯಮ ಹೇಳಿಕೆ ನೀಡಿದ ಅವರು ಈಗಾಗಲೇ ಅನ್ವರ್ ಮಣಿಪ್ಪಾಡಿ ಅವರು ವಕ್ಫ್ ಆಸ್ತಿ ಅತಿಕ್ರಮ ಕುರಿತು ವಿವರವಾದ ವರದಿ ನೀಡಿದ್ದರೂ ಅದನ್ನು ಅನುಮೋದಿಸಿ ಜಾರಿಗೆ ತರದೇ ಇರುವುದರಿಂದ ವಕ್ಫ್ ಆಸ್ತಿ ಅನ್ಯರ ಪಾಲಾಗಿದ್ದು, ಇದರ ರಕ್ಷಣೆ ಮಾಡಲು ಸಮಿತಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಇದರ ಜೊತೆಗೆ ಮಸೀದಿ, ಖಬ್ರಸ್ತಾನ್, ಆಷುರ ಖಾನಾಗಳಿಗೆ ಬರುವ ಅನುದಾನ ದುರ್ಬಳಕೆ ಯಾಗುತ್ತಿದ್ದು ಇದರ ವಿರುದ್ಧವೂ ಹೋರಾಟ ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಸಮಿತಿ ರಚಿಸಲಾಗಿದ್ದು, ಸಂಕ್ರಮಣದ ನಂತರ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಿಕೊಂಡು ಹೋರಾಟ ಮಾಡಲಾಗುತ್ತದೆ ಎಂದು ತಿಳಿಸಿದ ಅವರು, ಈಗಾಗಲೇ ಹೋರಾಟ ಮಾಡುತ್ತಿರುವ ಹೋರಾಟಗಾರರು ವ್ಯಕ್ತಿಗತವಾಗಿ ನ್ಯಾಯಕ್ಕಾಗಿ ಸಂಘರ್ಷ ನಡೆಸಿದ್ದು ಅವರೆಲ್ಲರೂ ಒಂದೇ ವೇದಿಕೆಯಡಿ ಒಗ್ಗೂಡಿದರೆ ಈ ಹೋರಾಟ ಯಶಸ್ವಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಿಗುವ ಸೌಲತ್ತುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಸಮಿತಿ ಮಾಡಲಿದೆ ಎಂದು ಅವರು ಇದೇ ವೇಳೆ ತಿಳಿಸಿದರು.
ಆಸಕ್ತರು 9901018163 / 9844906021 ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಅವರು ಮನವಿ ಮಾಡಿದರು.