ವಕೀಲ ಈರಣ್ಣಗೌಡ ಕೊಲೆ: ಮೂವರು ಆರೋಪಿಗಳ ಬಂಧನ

ಕಲಬುರಗಿ,ಡಿ.8-ನಗರದ ಸಾಯಿ ಮಂದಿರ ಸಮೀಪದ ಅಪಾರ್ಟ್‍ಮೆಂಟ್ ಬಳಿ ನಿನ್ನೆ ಬೆಳಿಗ್ಗೆ ನಡೆದ ವಕೀಲ ಈರಣ್ಣಗೌಡ ಪೊಲೀಸ್ ಪಾಟೀಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಿಶ್ವವಿದ್ಯಾಲಯ ಪೊಲೀಸರು ಬಂಧಿಸಿದ್ದಾರೆ.
ಉದನೂರ ಗ್ರಾಮದ ಮಲ್ಲಿನಾಥ ತಂದೆ ಬಸಣ್ಣ (45), ಭಾಗಣ್ಣ ಅಲಿಯಾಸ್ ಭಗವಾನ್ ತಂದೆ ಅವ್ವಣ್ಣಪ್ಪ (20) ಮತ್ತು ಅವ್ವಣ್ಣಪ್ಪ ತಂದೆ ಭಗವಂತರಾವ (45) ಬಂಧಿತ ಆರೋಪಿಗಳು.
ಗುರುವಾರ ಬೆಳಿಗ್ಗೆ 10.30ರ ಸುಮಾರಿಗೆ ಬೈಕ್ ಮೇಲೆ ಕೋರ್ಟಿಗೆ ಹೊರಟಿದ್ದ ಈರಣ್ಣಗೌಡ ಅವರನ್ನು ಇಬ್ಬರು ವ್ಯಕ್ತಿಗಳು ತಡೆದು ಕಣ್ಣಿಗೆ ಖಾರದ ಪುಡಿ ಎರಚಿ ಕೈಯಲ್ಲಿ ಮಚ್ಚು ಹಿಡಿದುಕೊಂಡು ಬೆನ್ನಟ್ಟಿ ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿದ್ದರು.
ಹಾಡುಹಗಲೇ ಜನನಿಬೀಡ ಪ್ರದೇಶದಲ್ಲಿ ನಡೆದ ಈ ಬರ್ಬರ ಕೊಲೆ ಪ್ರಕರಣ ಸಾಯಿ ಮಂದಿರ ಮತ್ತು ರಾಮ ಮಂದಿರ ಏರಿಯಾದ ಜನತೆ ಬೆಚ್ಚಿ ಬೀಳುವಂತೆ ಮಾಡಿತ್ತು. ಈ ಸಂಬಂಧ ಈರಣ್ಣಗೌಡ ಅವರ ಪತ್ನಿ ನಾಗರತ್ನಮ್ಮಾ ಅವರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ 8 ಜನರ ವಿರುದ್ಧ ದೂರು ಸಲ್ಲಿಸಿದ್ದರು. ನಾಗರತ್ನಮ್ಮಾ ಅವರು ಸಲ್ಲಿಸಿದ ದೂರು ಮತ್ತು ಸಿಸಿಟಿವಿ ಫುಟೇಜ್ ಆಧರಿಸಿ ತನಿಖೆ ನಡೆಸುತ್ತಿರುವ ಪೊಲೀಸರು ಮೂವರನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
ಹಿನ್ನೆಲೆ
ಈರಣ್ಣಗೌಡ ಮತ್ತು ಅವರ ಸಹೋದರ ಸಂಬಂಧಿಗಳ ನಡುವೆ ಆಸ್ತಿ ವಿವಾದವಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ಕೇಸ್ ನಡೆದಿತ್ತು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಹೋದರ ಸಂಬಂಧಿಗಳು ಈರಣ್ಣಗೌಡ ಅವರಿಗೆ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರು ಆತ್ಮರಕ್ಷಣೆಗಾಗಿ ಪಿಸ್ತೂಲ್ ಲೈಸೆನ್ಸ್ ಸಹ ಪಡೆದಿದ್ದರು. ಜೀವ ಬೆದರಿಕೆ ಹಾಕಿದ್ದರಿಂದ ರಕ್ಷಣೆ ಕೋರಿ 5ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಗುರುವಾರ (ಡಿಸೆಂಬರ್ 7) ಅರ್ಜಿ ವಿಚಾರಣೆ ನಡೆಯಲಿದ್ದ ಹಿನ್ನೆಲೆಯಲ್ಲಿ ಅವರು ಬೆಳಿಗ್ಗೆ 10.30ಕ್ಕೆ ಉದನೂರ ತೋಟದ ಮನೆಯಿಂದ ನಗರದಲ್ಲಿರುವ ಮನೆಗೆ ಬಂದು ಅಲ್ಲಿಂದÀ ಕೋರ್ಟ್‍ಫೈಲ್ ತೆಗೆದುಕೊಂಡು ಬೈಕ್ ಮೇಲೆ ಹೋಗುತ್ತಿದ್ದಾಗ ಸಾಯಿಮಂದಿರದ ಅಪಾರ್ಟ್‍ಮೆಂಟ್ ಬಳಿ ಅವರನ್ನು ಮಾರಕಾಸ್ತ್ರದಿಂದ ಹೊಡೆದು, ನಂತರ ತಲೆಯ ಮೇಲೆ ಗುಂಡು ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು.