ವಕೀಲೆಯ ಮನೆಗೆ ನುಗ್ಗಿ ನಗ-ನಗದು ಕಳವು

ಉಡುಪಿ, ಜು.೨೧- ನಗರದ ಕೋರ್ಟ್ ಹಿಂಬದಿ ರಸ್ತೆಯ ವಕೀಲರೊಬ್ಬರ ಮನೆಗೆ ನುಗ್ಗಿದ ಕಳ್ಳರು 25 ಲಕ್ಷ ರೂ. ಮೌಲ್ಯದ ನಗನಗದು ಕಳವು ಮಾಡಿರುವ ಘಟನೆ ನಡೆದಿದೆ.
ಉಡುಪಿಯ ವಕೀಲೆ ವಾಣಿ ವಿ. ರಾವ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಬೆಡ್‌ರೂಂನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್‌ನಲ್ಲಿ ಇರಿಸಿದ್ದ ಪರ್ಸ್ ನಲ್ಲಿದ್ದ 45,000 ರೂ. ನಗದು ಮತ್ತು ವ್ಯಾನಿಟಿ ಬ್ಯಾಗ್‌ನಲ್ಲಿರಿಸಿದ್ದ 5 ಪವನ್ ತೂಕದ ಪಚ್ಚೆಕಲ್ಲು ಇರುವ ಚಿನ್ನದ ಬ್ರೇಸ್‌ಲೇಟ್‌, 6 ಪವನ್‌ ತೂಕದ 2 ಮುತ್ತಿನ ಬಳೆ, ಐದೂವರೆ ಪವನ್‌ ತೂಕದ 2 ಚಿನ್ನದ ಖಡಗ ಬಳೆಗಳು, 6 ಪವನ್‌ ತೂಕದ ಚಿನ್ನದ ಸರ ಮತ್ತು 1 ಪವನ್‌ ತೂಕದ ಪೆಂಡೆಂಟ್‌, 6 ಪವನ್‌ ತೂಕದ ಮಲ್ಲಿಗೆ ಮೊಗ್ಗು ಚಿನ್ನದ ಸರ, ಒಂದೂವರೆ ಪವನ್‌ ತೂಕದ ಚಿನ್ನದ ಸರ ಮತ್ತು ನೀಲಿ ಹರಳಿನ ಪೆಂಡೆಂಟ್‌, ನೀಲಿ ಕಲ್ಲಿನ ಬೆಂಡೋಲೆ ಮತ್ತು ಕರಮಣಿ ಹರಳಿನ 2 ಬೆಂಡೋಲೆ, ಜುಮ್ಕಿ ಮತ್ತು 2 ಮಾಟಿ ಜೊತೆ, ಒಂದು ಪವನ್‌ ತೂಕದ ಚಿನ್ನದ ತುಂಡುಗಳು ಮತ್ತು ಕೊಕ್ಕೆ, 3 ಪವನ್‌ ತೂಕದ ಚಿನ್ನದ ನೆಕ್ಲೇಸ್‌, ಎರಡೂವರೆ ಪವನ್‌ ತೂಕದ ಗ್ರೇನೆಟ್‌ ಹರಳಿನ ನೆಕ್ಲೇಸ್‌ ಮತ್ತು 3 ಪವನ್‌ನ ಗ್ರೇನೆಟ್‌ ಹರಳಿನ ಬಳೆ, 4 ಗ್ರಾಮ್‌ ನ 6 ಚಿನ್ನದ ನಾಣ್ಯ, 4 ರೇಷ್ಮೆ ಸೀರೆ ಸೇರಿದಂತೆ ಐದು ಸೀರೆಗಳನ್ನು ಕಳವು ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.