ವಕೀಲೆಯ ಮನೆಗೆ ನುಗ್ಗಿ ಕಳವು: ಆರೋಪಿ ಸೆರೆ

ಉಡುಪಿ, ಜು.೨೫- ಕೆಲವು ದಿನಗಳ ಹಿಂದೆ ನಗರದಲ್ಲಿರುವ ವಕೀಲೆಯೊಬ್ಬರ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗನಗದು ಕಳವು ಮಾಡಿರುವ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ತಿರೂರು ಗ್ರಾಮದ ಮುತ್ಸವ ಬಸಪ್ಪ ಮಾವರಾಣಿ (27) ಬಂಧಿತ ಆರೋಪಿ. ನಗರದ ಕೋರ್ಟ್ ಹಿಂಬದಿ ರಸ್ತೆಯ ನಿವಾಸಿ ವಕೀಲೆ ವಾಣಿ ವಿ.ರಾವ್ ಎಂಬವರ ಮನೆಗೆ ಜು.19ರಂದು ನುಗ್ಗಿದ ದುಷ್ಕರ್ಮಿಗಳು, ಒಟ್ಟು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಸೀರೆ ಹಾಗೂ 45 ಸಾವಿರ ರೂ. ನಗದು ಕಳವು ಮಾಡಿ ಕೊಂಡು ಹೋಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ನೀಲನಗರ ಸಿದ್ಧೇಶ್ವರ ಕ್ರಾಸ್ ಬಳಿ ವಶಕ್ಕೆ ಪಡೆದು 10ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 38,500 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಉಡುಪಿ ಎಸ್ಪಿ ವಿಷುವರ್ಧನ್ ಆದೇಶದಂತೆ, ಹೆಚ್ಚುವರಿ ಎಸ್ಪಿ ಸಿದ್ಧಲಿಂಗಪ್ಪ, ಡಿವೈಎಸ್ಪಿ ಸುಧಾಕರ ಸದಾನಂದ ನಾಯ್ಕ ನಿರ್ದೇಶನದಲ್ಲಿ ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಮಾರ್ಗದರ್ಶನ ದಂತೆ ಎಸ್ಸೈಗಳಾದ ಮಹೇಶ್ ಟಿ.ಎಂ., ಪ್ರಸಾದ್‌ ಕುಮಾರ್ ಹಾಗೂ ಎಎಸ್ಸೈ ಅರುಣ್ ಸತೀಶ್ ಬೆಳ್ಳೆ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.