ವಕೀಲರ ಸಂಘವು ನ್ಯಾಯಾಧೀಶರನ್ನು ಉತ್ಪಾದಿಸುವ ಕೇಂದ್ರ: ನ್ಯಾ. ಅರವಿಂದ

ಉಡುಪಿ, ಮಾ.1೪- ನ್ಯಾಯ ವಿತರಣೆಯಿಂದ ವಂಚಿತರಾಗಿರುವವರಿಗೆ ನ್ಯಾಯ ಕೊಡಿಸುವುದು ವಕೀಲರ ಆದ್ಯ ಕರ್ತವ್ಯ. ಅದಕ್ಕೆ ಜನರಿಗೆ ಕಾನೂನು ಅರಿವು ಮೂಡಿಸುವ ಕಾರ್ಯವನ್ನು ವಕೀಲರು ಮಾಡಬೇಕು. ಪ್ರತಿಯೊಬ್ಬರಿಗೂ ನ್ಯಾಯ ವಿತರಣೆಯಲ್ಲಿ ಹಕ್ಕು ಇದೆ ಎಂಬುದನ್ನು ಮನವರಿಕೆ ಮಾಡಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯಕಾರಿ ಅಧ್ಯಕ್ಷ ಹಾಗೂ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಹೇಳಿದ್ದಾರೆ.

ಉಡುಪಿ ವಕೀಲರ ಸಂಘದ ವತಿಯಿಂದ ವಕೀಲರಿಗಾಗಿ ಉಡುಪಿ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನ ಗಳ ಕರ್ನಾಟಕ ರಾಜ್ಯ ಮಟ್ಟದ ಸಾಂಸ್ಕೃತಿಕ ಹಬ್ಬ ‘ಉತ್ಸವ್’ ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಯಾವುದೇ ಅರಿವು ಇಲ್ಲ. ಆದುದರಿಂದ ಪ್ರತೀ ಹಳ್ಳಿಗಳಿಗೆ ವಕೀಲರ ತಂಡ ಗಳನ್ನು ರಚಿಸಿಕೊಂಡು ಹೋಗಿ ಕಾನೂನು ಅರಿವು ಮೂಡಿಸಬೇಕು. ಈ ಕಾನೂನು ಅರಿವು ಮೂಡಿ ಸುವುದರಿಂದ ವಕೀಲರ ಸಮುದಾಯಕ್ಕೆ ಲಾಭವಾಗುತ್ತದೆ. ಕೋರ್ಟ್‌ಗಳಲ್ಲಿ ಕೇಸುಗಳು ಜಾಸ್ತಿ ಇದೆ ಎಂಬುದನ್ನು ಬಿಟ್ಟು ಎಲ್ಲರಿಗೂ ನ್ಯಾಯ ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ವಕೀಲರು ಅಂದರೆ ಕೇವಲ ಶುಲ್ಕ ತೆಗೆದುಕೊಳ್ಳುವವರು ಎಂಬ ಅಭಿಪ್ರಾಯ ವನ್ನು ಜನರ ಮನಸ್ಸಿನಿಂದ ಹೋಗಲಾಡಿಸಬೇಕು. ಅದಕ್ಕಾಗಿ ವಕೀಲರು ಕೇವಲ ಇದಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸಾಬೀತುಪಡಿಸಿ ತೋರಿಸಬೇಕು. ಆ ಮೂಲಕ ಉಡುಪಿ ವಕೀಲರ ಸಂಘ ಇಡೀ ದೇಶಕ್ಕೆ ಮಾದರಿಯಾಗಬೇಕು. ಸಾಕಷ್ಟು ಒತ್ತಡದಲ್ಲಿ ಕೆಲಸ ನಿರ್ವಹಿಸುವ ವಕೀಲರು, ಇದರಿಂದ ಹೊರಗೆ ಬರಲು ಸಾಂಸ್ಕೃತಿಕ ಕಾರ್ಯಕ್ರಮಗಳ ಅಗತ್ಯ ಇದೆ ಎಂದು ಅವರು ತಿಳಿಸಿದರು. ವಕೀಲರ ಸಂಘವು ನ್ಯಾಯಾಧೀಶರನ್ನು ಉತ್ಪಾದಿಸುವ ಕೇಂದ್ರ ಆಗಿದೆ. ಆದುದರಿಂದ ಉತ್ತಮ ವಕೀಲರ ಸಂಘದಿಂದ ಉತ್ತಮ ನ್ಯಾಯಾಧೀಶರು ಸೃಷ್ಠಿಯಾಗುತ್ತಾರೆ. ಒಳ್ಳೆಯ ನ್ಯಾಯಾಧೀಶರು ಇರುವಲ್ಲಿ ಒಳ್ಳೆಯ ವಕೀಲರ ಸಂಘ ಇರುತ್ತದೆ. ಅದಕ್ಕಾಗಿ ಕಠಿಣ ಪರಿಶ್ರಮ ಪಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಅಧ್ಯಕ್ಷತೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹೈಕೋರ್ಟ್ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ಮಾತನಾಡಿದರು. ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುಬ್ರಹ್ಮಣ್ಯ ಜೆ.ಎನ್., ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸಿ.ಎಂ.ಜೋಶಿ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ದಿವಾಕರ ಎಂ.ಶೆಟ್ಟಿ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ಎಚ್.ರಾಘವೇಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.