ವಕೀಲರ ಸಂಘದ ಸದಸ್ಯರ ಸಹಕಾರ ಸ್ಮರಣೀಯ

ಹುಬ್ಬಳ್ಳಿ, ಮೇ10: ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ಜಿ.ಎ. ಮೂಲಿಮನಿಯವರು ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಕೀಲರ ಸಂಘದ ಪದಾಧಿಕಾರಿಗಳು ಮಂಗಳವಾರ ಬೀಳ್ಕೊಟ್ಟರು.
ಈ ವೇಳೆ ಮಾತನಾಡಿದ ನ್ಯಾಯಾಧೀಶ ಜಿ.ಎ. ಮೂಲಿಮನಿ, ನಾನು ಕಾರ್ಮಿಕ ನ್ಯಾಯಾಲಯದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಾಗ ನ್ಯಾಯ ಬೇಡಿ ಬರುವ ಕಕ್ಷಿದಾರರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಸಂಘದ ಸದಸ್ಯರು ಹೆಚ್ಚಿನ ಸಹಕಾರ ನೀಡಿದ್ದಾರೆ.ಅಲ್ಲದೇ ಸಂಘದ ಅಧ್ಯಕ್ಷ ಸಿ.ಆರ್.ಪಾಟೀಲ ಅವರು ಲೋಕ್ ಅದಾಲತ್ ಪ್ರಕರಣಗಳ ವಿಲೇವಾರಿಗೆ ಸಹಕರಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಸಿ.ಆರ್.ಪಾಟೀಲ ಮಾತನಾಡಿ, ನ್ಯಾಯಾಧೀಶರಾದ ಜಿ.ಎ. ಮೂಲಿಮನಿಯವರು ನ್ಯಾಯ ಬೇಡಿ ಬರುವ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಸಂಘದ ಸದಸ್ಯರ ಸಹಕಾರವನ್ನು ಪಡೆದು ಉತ್ತಮವಾದ ನ್ಯಾಯ ನಿರ್ಣಯ ಮಾಡಿದ್ದಾರೆ ಎಂದು ಹೇಳಿದರು.
ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಇಂದಿರಾ ಮೇಲಸ್ವಾಮಿ ಚಿಟ್ಟಿಯಾರ, ನ್ಯಾಯಾಧೀಶರಾದ ಆರ್. ಎಸ್. ಚಿನ್ನಣ್ಣವರ, ತ್ರಿವೇಣಿ ಇರಗಾರ, ಅನಿತಾ ಸಾಲಿ, ಕರ್ಣ ಸಿಂಗ್, ಶ್ವೇತಾ ಪಾಟೀಲ, ಸಂಘದ ಉಪಾಧ್ಯಕ್ಷ ಐ.ಕೆ. ಬೆಳಗಲಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ಎಸ್.ವೈ. ದುಂಡರಡ್ಡಿ, ಕೆ.ಎಂ. ಲೋಕೇಶ, ಸಾವಿತ್ರಿ ಪೊಲೀಸಗೌಡರ, ಬಿ.ಎನ್.ಸಾಲಿಮಠ, ಜಯರಾಜ ಪಾಟೀಲ, ಎಂ.ಎಚ್.ಭಟ್, ಆರ್.ಬಿ. ಗದಗಕರ, ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ ಅಣ್ವೇಕರ ಇದ್ದರು.