ವಕೀಲರ ಸಂಘದಿಂದ ಪ್ರತಿಭಟನೆ, ತಹಸೀಲ್ದಾರ್‌ಗೆ ಮನವಿ

ದೇವದುರ್ಗ.ಜು,೨೮- ರಾಜ್ಯ ಸರಕಾರದ ಜನನ ಮತ್ತು ಮರಣ ನೋಂದಣಿ ಕಾಯಿದೆಯ ತಿದ್ದುಪಡಿ ವಿರೋಧಿಸಿ ದೇವದುರ್ಗ ವಕೀಲರ ಸಂಘ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ ಮುಖಾಂತರ ಸಲ್ಲಿಸಿತು.
ಜನನ ಮತ್ತು ಮರಣ ನೋಂದಣಿ ವಿಳಂಬದ ಸಂಬಂಧ ವಿವಾದಗಳು ಏರ್ಪಟ್ಟಲ್ಲಿ ಅಥವಾ ತಿದ್ದುಪಡಿ ಅವಶ್ಯಕವಿದ್ದಲ್ಲಿ ವ್ಯಕ್ತಿಗಳು ಜನನ ಮತ್ತು ನೋಂದಣಿ ಕಾಯ್ದೆ ಕಲಂ: ೧೩ ರ ಪ್ರಕಾರ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ದಾಖಲಾತಿಗಳನ್ನು ನೀಡಿ ನ್ಯಾಯಾಲಯದ ಆದೇಶದ ನಂತರ ಸಂಬಂಧಪಟ್ಟ ಪ್ರಾಧಿಕಾರಗಳು ಈ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡುತ್ತಿದ್ದರು.
ಆದರೆ ಕರ್ನಾಟಕ ಸರಕಾರ ಈ ಮೇಲೆ ಹೇಳಿದ ಆದೇಶದ ಅನ್ವಯ ಈಗಿರುವ ಜೆಎಮ್‌ಎಫ್‌ಸಿ ನ್ಯಾಯಾಲಯದ ಅಧಿಕಾರವನ್ನು ತೆಗೆದು ಉಪ-ವಿಭಾಗಾಧಿಕಾರಿಗಳ ನ್ಯಾಯಾಂಗಕ್ಕೆ ನೀಡಿದೆ. ಇದು ಜನ ಸಂದಣಿಗೆ ತೊಂದರೆ ನೀಡುವ ಮತ್ತು ಕ್ರಮಬದ್ದ ರೀತಿಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರವನ್ನು ಪಡೆಯಲು ಕಷ್ಟ ಸಾಧ್ಯವಾಗುತ್ತದೆ.
ಈಗಾಗಲೇ ರೆವಿನ್ಯೂ ನ್ಯಾಯಾಲಯಗಳಲ್ಲಿ ಪ್ರಭಾವ, ಅಸಂಬದ್ದ ಆದೇಶಗಳು ನೀಡುವ ಮೂಲಕ ಜನರಿಗೆ ಸೂಕ್ತ ನ್ಯಾಯ ದೊರೆಯುತ್ತಿಲ್ಲ. ಒಂದೊಮ್ಮೆ ಉಪ-ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಈ ಅಧಿಕಾರವನ್ನು ನೀಡಿದ್ದಲ್ಲಿ ೮೦-೧೦೦ ಕಿ.ಮೀ., ದೂರದಿಂದ ಕಕ್ಷಿದಾರರು ಎಸಿ ಕಚೇರಿಗೆ ಬರಬೇಕಾಗಿದ್ದು, ಇದರಿಂದ ಜನಸಾಮಾನ್ಯರು ಓಡಾಡಿ ಹರಸಾಹಸ ಪಡಬೇಕಾಗುತ್ತದೆ. ಅಲ್ಲದೇ ಈ ಎಸಿ ಕಚೇರಿಗೆ ಈ ಜನನ ಮತ್ತು ಮರಣ ಪ್ರಮಾಣಪತ್ರವನ್ನು ಕೊಡಿಸಲು ಮಧ್ಯವರ್ತಿಗಳು ಹುಟ್ಟಿಕೊಳ್ಳುತ್ತಾರೆ. ಮತ್ತು ಮುಂದೊಂದು ದಿನ ಅಭದ್ರತೆಗೆ ಕಾರಣವಾಗುತ್ತದೆ.
ಆದ್ದರಿಂದ ತಾವುಗಳು ಈ ಸಂಬಂಧ ಕರ್ನಾಟಕ ಸರಕಾರ ಈಗ ಹೊರಡಿಸಿರುವ ಜನನ ಮತ್ತು ಮರಣ ನೋಂದಣಿ ಸಂಬಂಧ ಕರ್ನಾಟಕ ರಾಜ್ಯ ಸರಕಾರದ ಅಧಿಸೂಚನೆ ನಂ. ಪಿ.ಡಿ.ಎಸ್.೬೬ ಎಸ್.ಎಸ್.ಎಂ ೨೦೨೨ ದಿನಾಂಕ: ೧೮-೦೭-೨೦೨೨ನ್ನು ವಾಪಿಸು ಪಡೆದು ಈ ಹಿಂದಿನಂತೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅಧಿಕಾರ ವ್ಯಾಪ್ತಿ ಮುಂದುವರೆಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯ ನೇತೃತ್ವವನ್ನು ವಕೀಲರ ಸಂಘದ ಅಧ್ಯಕ್ಷರಾದ ವೆಂಕಟೇಶ ಡಿ.ಚವ್ಹಾಣ ಅವರು ವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷರಾದ ರವಿಕುಮಾರ ಪಾಟೀಲ್ ಅಳ್ಳುಂಡಿ, ಹಿರಿಯ ನ್ಯಾಯವಾದಿಗಳಾದ ಬಸವರಾಜ್ ಎಸ್.ಗೌರಂಪೇಟೆ, ವೇಣುಗೋಪಾಲಗೌಡ ಜಾಲಹಳ್ಳಿ, ನರಸಪ್ಪ ಚಿಂಚೋಡಿ, ಮಲ್ಲಿಕಾರ್ಜುನ ಪಾಟೀಲ್, ನಿಂಗಪ್ಪ ಅಂಚೆಸೂಗೂರು, ಶೇಖರಪ್ಪ ಕೋಳೂರು, ಸುರೇಶ ಪಾಟೀಲ್, ಅಮ್ಜದಖಾನ್ ಹವಾಲ್ದಾರ, ಹನುಮಂತರಾಯ ಕರಿಗುಡ್ಡ, ಪಿಡ್ಡಯ್ಯ ನಗರಗುಂಡ, ಸೋಮಶೇಖರಗೌಡ ಅಂಜಳ, ವಸಂತಕುಮಾರ ಇತರರಿದ್ದರು.