ವಕೀಲರ ಮೇಲೆ ಹಲ್ಲೆ ಮೂವರ ಸೆರೆ

ಬೆಂಗಳೂರು,ಆ.೩-ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮ್ಮ ಕಡೆಯ ೮ ಮಂದಿಗೆ ಜಾಮೀನು ಕೊಡಿಸಲು ವಕೀಲರನ್ನೇ ಅಪಹರಿಸಿ ನಿನ್ನೆ ರಾತ್ರಿಯಿಡೀ ಹಲ್ಲೆ ನಡೆಸಿರುವ ಅಮಾನವೀಯ ಕೃತ್ಯ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ವಕೀಲ ಗಿರಧರ್ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹಲ್ಲೆ ಸಂಬಂಧ ವಕೀಲ ಗಿರಧರ್ ನೀಡಿದ ದೂರು ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್ ಆಪಲ್ ಸೇರಿ ಮೂವರನ್ನು ಬಂಧಿಸಲಾಗಿದೆ.
ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೊಬ್ಬನ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದ್ದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಕಾರಿನಲ್ಲಿ ಹೋಗುತ್ತಿದ್ದ ವಕೀಲ ಗಿರಧರ್ ಅವರನ್ನು ಅವರ ಕಾರ್‌ನಲ್ಲೇ ಅಪಹರಿಸಿದ ಬಂಧಿತ ಮೂವರು ಸೇರಿ ನಾಲ್ವರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮ್ಮ ಕಡೆಯ ೮ ಮಂದಿಗೆ ಜಾಮೀನು ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾರೆ.
ಜೈಲಿನಲ್ಲಿರುವವ ಪ್ರಕರಣಗಳ ವಿವರ ಪಡೆದು ಜಾಮೀನು ದೊರಕಿಸಿಕೊಡುವುದು ಕಷ್ಟ ಎಂದಾಗ ಆಕ್ರೋಶಗೊಂಡ ಆರೋಪಿಗಳು ವಕೀಲರ ಬಟ್ಟೆ ಬಿಚ್ಚಿಸಿ ಕಾರಿನ ಜಾಕ್ ರಾಡ್ ಹಾಗೂ ಸ್ಪಾನರ್ ಬಳಸಿ ಹಲ್ಲೆ ಮಾಡಿದ್ದಾರೆ.
ಗಿರಿಧರ್ ಅವರಿಗೆ ೫ ಲಕ್ಷ ರೂ. ಹಣ ತಂದು ಕೊಡಬೇಕು ಅಲ್ಲದೇ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಸಿ ೧೦ ಸಾವಿರ ರೂ ಕಸಿದುಕೊಂಡು ಬಿಟ್ಟು ಕಳಿಸಿದ್ದಾರೆ.
ಈ ಸಂಬಂಧ ರೌಡಿಗಳಾದ ರಾಜೇಶ್ ಅಲಿಯಾಸ್ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್ ಆಪಲ್, ಜಾನ್ ಹಾಗೂ ಭರತ್ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವಕೀಲ ಗಿರಿಧರ್ ದೂರು ದಾಖಲಿಸಿದ್ದರು. ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.