ವಕೀಲರ ಪರಿಷತ್ ನಲ್ಲಿ ಸಿಡಿ ಯುವತಿ ಪರ ವಕೀಲ ನೊಂದಣೆಯಾಗದೇ ವಿವಾದ

ಬೆಂಗಳೂರು,ಏ.1-ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದ ಯುವತಿ ಪರ ವಕಾಲತ್ತು ವಹಿಸಿರುವ ವಕೀಲ ಕೆ.ಎನ್. ಜಗದೀಶ್ ಕುಮಾರ್ ಕರ್ನಾಟಕ ರಾಜ್ಯ ವಕೀಲರ ಪರಿಷತ್(ಕೆಎಸ್​​ಬಿಸಿ)ನಲ್ಲಿ ಹೆಸರನ್ನೇ ನೋಂದಾಯಿಸಿಕೊಂಡಿಲ್ಲ ಎಂಬುದು ಬಹಿರಂಗವಾಗಿದೆ.
ಹಾಗೆಯೇ ಜಗದೀಶ್ ಕುಮಾರ್ ಹೆಸರಿನಲ್ಲಿ ಯಾವುದೇ ವಕೀಲಿಕೆ ಸನ್ನದು ವರ್ಗಾವಣೆ ಕೋರಿ ಬಂದಿಲ್ಲ ಎಂದು ರಾಜ್ಯ ವಕೀಲರ ಪರಿಷತ್ತು ತಿಳಿಸಿರುವುದು ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಒಂದು ವೇಳೆ ಜಗದೀಶ್ ಬೇರೆ ಯಾವುದೇ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರು ಭಾರತೀಯ ವಕೀಲರ ಪರಿಷತ್ತಿನ ನಿಯಮಗಳ ಪ್ರಕಾರ 6 ತಿಂಗಳ ಬಳಿಕ ರಾಜ್ಯದಲ್ಲಿ ವಕೀಲಿಕೆ ಮುಂದುವರೆಸುವಂತಿಲ್ಲ ಎಂದು ಕೆಎಸ್​​ಬಿಸಿ ಮಾಹಿತಿ ನೀಡಿದೆ.
ವಕೀಲ ಕೆ.ಎನ್ ಜಗದೀಶ್ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರುವ ಕುರಿತು ಮಾಹಿತಿ ನೀಡುವಂತೆ ರಾಜ್ಯ ವಕೀಲರ ಪರಿಷತ್ತಿನ ಹಿರಿಯ ಸದಸ್ಯರಾದ ಎಸ್.ಬಸವರಾಜು ಅವರು ಪರಿಷತ್ ಮ್ಯಾನೇಜರ್​​ಗೆ ಸೂಚಿಸಿದ್ದರು.
ಈ ಮೇರೆಗೆ ಮಾಹಿತಿ ನೀಡಿರುವ ಪರಿಷತ್ ಮ್ಯಾನೇಜರ್, ಕೆ.ಎನ್ ಜಗದೀಶ್ ಕುಮಾರ್ ಕೆಎಸ್​ಬಿಸಿಯಲ್ಲಿ ನೋಂದಾಯಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕೆ.ಎನ್ ಜಗದೀಶ್ ತಾವು ದೆಹಲಿ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೇ ದೆಹಲಿ ಬಾರ್ ಕೌನ್ಸಿಲ್​ನಲ್ಲಿ ಪಡೆದಿಕೊಂಡಿರುವ ಎನ್ರೋಲ್ಮೆಂಟ್ ಐಡಿ ಕಾರ್ಡನ್ನು ಫೇಸ್​​ಬುಕ್​​ನಲ್ಲೂ ಪೋಸ್ಟ್ ಮಾಡಿಕೊಂಡಿದ್ದಾರೆ.
ವಕೀಲರ ಕಾಯ್ದೆ-1961ರ ನಿಯಮ 30ರ ಪ್ರಕಾರ ಯಾವುದೇ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡರೂ ಅವರು ದೇಶದ ಯಾವುದೇ ಕೋರ್ಟ್​​ನಲ್ಲಿ ವಕೀಲಿಕೆ ಮಾಡಬಹುದು.
ಆದರೆ, ಕಾರ್ಯಕ್ಷೇತ್ರವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾಯಿಸಿಕೊಂಡಾಗ 6 ತಿಂಗಳ ಒಳಗೆ ಯಾವ ರಾಜ್ಯದಲ್ಲಿ ವಕೀಲಿಕೆ ನಡೆಸುತ್ತಾರೋ ಅಲ್ಲಿನ ಪರಿಷತ್ತಿಗೆ ತಮ್ಮ ಸನ್ನದನ್ನು ವರ್ಗಾವಣೆ ಮಾಡಿಕೊಳ್ಳಬೇಕು ಎಂದು ಭಾರತೀಯ ವಕೀಲರ ಪರಿಷತ್ತು ನಿಯಮ ಮಾಡಿದೆ.