ವಕೀಲರಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಒತ್ತಾಯ

ದಾವಣಗೆರೆ.ಮೇ.೨೦; ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಲ್ಲಿ ಸಂಕಷ್ಟಕ್ಕೀಡಾದ ವಕೀಲರಿಗೆ ಯಾವುದೇ ಹಣಕಾಸಿನ ಸಹಾಯ ನೀಡಿರುವುದಿಲ್ಲ. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೂ ಕೂಡ ಹಣಕಾಸಿನ ಅನುದಾನ ಘೋಷಣೆ ಮಾಡಿಲ್ಲ. ಲಾಕ್‌ಡೌನ್ ಪರಿಣಾಮ ಹಲವು ವಕೀಲರುಗಳು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರ ವಕೀಲರಿಗೆ ಕೂಡಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಶೇ. 60ರಷ್ಟು ವಕೀಲರು ತಮ್ಮ ವಕೀಲ ವೃತ್ತಿಯನ್ನೇ ಅವಲಂಬಿಸಿ, ತಮ್ಮ ಜೀವನವನ್ನು ಕಟ್ಟಿಕೊಂಡಿರುತ್ತಾರೆ. ಇಂಥವರಿಗೆ ಯಾವುದೇ ವಿಧವಾದ ಸೌಲತ್ತುಗಳು ಇರುವುದಿಲ್ಲ. ಕಳೆದ ಒಂದು ವರ್ಷದಿಂದ ದೈನಂದಿನ ಕೋರ್ಟ್ ನಡೆಯದೇ ಕೇವಲ 2 ತಿಂಗಳು ನಡೆದು, ಈಗ ಪುನಃ ದೈನಂದಿನ ಕೋರ್ಟ್ ಕಲಾಪಗಳು ನಡೆಯುತ್ತಿಲ್ಲ. ವಕೀಲರುಗಳಿಗೆ ಯಾವುದೇ ವೈದ್ಯಕೀಯ ಸೌಲಭ್ಯ, ಮಕ್ಕಳ ಶಿಕ್ಷಣ ಸೌಲಭ್ಯ, ನಿವೃತ್ತ ವೇತನ ಮತ್ಯಾವುದೇ ಸೌಲತ್ತುಗಳು ಇರುವುದಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ನ್ಯಾಯಾಂಗದ ಪ್ರಮುಖ ಭಾಗವಾಗಿರುವ ವಕೀಲ ವರ್ಗದ ರಕ್ಷಣೆ ಮಾಡುವ ಜವಾಬ್ದಾರಿಯಿರುತ್ತದೆ. ಸರ್ಕಾರ ಕೂಡಲೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಕಾನೂನು ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ, ಸಂಕಷ್ಟದಲ್ಲಿರುವ ವಕೀಲರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.