ವಂಶಾವಳಿ ಹೇಳುವ ಹೆಳವರು ಎಲ್ಲಿ ಹೋದರು?

ಕಲಬುರಗಿ ಡಿ 9: ಹಿಂದಿನ ಕಾಲದಲ್ಲಿ ಮನೆತನದ ವಂಶಾವಳಿ ಇತಿಹಾಸ ಹೇಳುವುದು ಹೆಳವರ ಕುಲ ಕಸಬು. ನಿಮ್ಮ ಪೂರ್ವಜರು ಎಲ್ಲಿಯವರು? ಅಡ್ಡ ಹೆಸರು ಯಾವುದು?ಬದಲಾಗಿದ್ದರೆ ಏಕೆ? ಯಾವ ಊರು? ಯಾಕೆ ವಲಸೆ ಬಂದರು. ಕುಟುಂಬದ ಮೂಲ ಪುರುಷಯಾರು? ಕುಲ ದೇವರು ಯಾರು? ಎಷ್ಟು ಆಸ್ತಿ ಇತ್ತು? ಈ ಎಲ್ಲ ವಿವವರಗಳ ಬಗ್ಗೆ ನೂರಾರು ವರ್ಷಗಳ ದಾಖಲೆ ಹೇಳುವರು ಜನರ ಬಾಯಲ್ಲಿ ಹೆಳವರಾಗಿದ್ದಾರೆ.
ಊರೂರು ಅಲೆಯುವದು ಜನರ ವಂಶಾವಳಿ ಬರೆಯುವದು ಜೋಪಾನವಾಗಿ ರಕ್ಷಿಸಿ ಮತ್ತೆ ಆ ಊರಿಗೆ ಹೋದಾಗ ವಂಶಾವಳಿ ಬಿತ್ತರಿಸುವದು ಇವರ ಕಾಯಕ. ಹೆಳವರು ಎತ್ತಿನ ಗಾಡಿಯ ಮೇಲೆ ಎತ್ತಿನ ಮೇಲೆ ಜಿಲ್ಲೆಯಿಂದ ಜಿಲ್ಲೆಗೆ ಅಲೆಯುತ್ತಾರೆ. ಇವರ ಹತ್ತಿರ 14 ರಿಂದ 15 ತಲೆಮಾರಿನ ವಂಶ ವೃಕ್ಷ ಮಾಹಿತಿ ಸಂಗ್ರಹವಾಗಿದೆ
ಕುಟುಂಬದಿಂದ ಊರವರಿಂದ ನಮ್ಮವರು ಮಾಹಿತಿ ಪಡೆದಿದ್ದನ್ನೆಲ್ಲಾ ನಮ್ಮ ಪೂರ್ವಜರು ದಾಖಲಿಸಿದ್ದಾರೆ. ಈಗ ಇರುವರು ಇತ್ತೀಚಿನ ಬೆಳವಣಿಗೆಯ ಬಗ್ಗೆಯೂ ಮಾಹಿತಿ ಪಡೆದು ಬರೆದುಕೊಂಡು ಹೋಗುತ್ತೇವೆ. ಕೋರ್ಟ ಕಛೇರಿಗಳಿಗೆ ನಮ್ಮನ್ನು ಸಾಕ್ಷಿಯಾಗಿ ಕರೆದ ಸಂದರ್ಭಗಳೂ ಇವೆ. ನಾವು ವಂಶಾವಳಿ ಹೇಳುತ್ತೇವೆಯೇ ಹೊರತು ದಾಖಲೆಯನ್ನು ತೋರಿಸುವುದಿಲ್ಲ. ಇದು ನಮ್ಮ ವೃತ್ತಿ ಗುಟ್ಟು ಎನ್ನುತ್ತಾರೆ.
ಇಂತಿಂಥ ಹಳ್ಳಿಗೆ ಇಂತಿಂಥವರೇ ಹೋಗಬೇಕು ಎಂಬಂಥ ರೂಢಿ ಇದ್ದಿದ್ದರಿಂದ ಒಬ್ಬರು ಹೋದಲ್ಲಿ ಮತ್ತೊಬ್ಬರು ಹೋಗುವ ಪದ್ದತಿ ಇಲ್ಲ ಎನ್ನುವರು.ಹಿಂದಿನ ದಾಖಲೆಗಳು ಹೇಗೆ ರಕ್ಷಿದಿದ್ದೀರಿ? ಎಂದು ಕೇಳಿದರೆ ಹೆಗಲ ಮೇಲೆ ಇಳಿಬಿಟ್ಟ ಭಾರಿ ತೂಕದ ಬಟ್ಟೆ ಗಂಟನ್ನು ಬಿಚ್ಚಿಡುತ್ತಾರೆ. ರೆಕಾರ್ಡ ಪುಸ್ತಕ ತೋರಿಸಿ ಒಂದೂವರೆ ಅಡಿ ಅಗಲ ಒಂದಡಿ ಉದ್ದದ ಸುಮಾರು ಐನೂರು ಪುಟಗಳ ಪುಸ್ತಕಕ್ಕೆ ಮೇಲೆ ಬಟ್ಟೆ ಹೊದಿಕೆ ಒಳಗೆ ನೂರಾರು ಜನರ ವಂಶಾವಳಿಯ ನಕ್ಷೆ ಎಲ್ಲ ವಿವರಗಳನ್ನು ತೋರಿಸುತ್ತಾರೆ. ಐನೂರು ವರ್ಷಗಳ ಹಿಂದಿನ ದಾಖಲೆಗಳು ಕಂಚಿನ ಪತ್ರಗಳಲ್ಲಿವೆ. ತಾಮ್ರ ಪತ್ರದ ಮೋಡಿ ಅಕ್ಷರಗಳು ಈಗ ಓದಲೂ ಕಷ್ಟ ಎಂದು ಹೇಳುತ್ತಾರೆ
ವಂಶಾವಳಿ ಕೇಳುವರು ದವಸ ಧಾನ್ಯ ಹಣ ಕಾಣಿಕೆಯಾಗಿ ಕೊಡುತ್ತಾರೆ .ಶ್ರೀಮಂತರು ಖುಷಿಯಾಗಿ ಬಂಗಾರ ಕೊಟ್ಟಿದ್ದು ಉಂಟು. ಆದರೂ ಮೊದಲಿನ ಹಾಗೆ ಹೆಚ್ಚು ಕೊಡುವುದಿಲ್ಲ.ಕೆಲವರು ವಂಶಾವಳಿ ತಗೊಂಡೇನು ಮಾಡೋದು ? ಎಂದು ಅಸಡ್ಡೆ ಮಾತನಾಡುವರು. ಈಗಿನ ಕಾಲಕ್ಕೆ ನಮ್ಮ ಮಂದಿಯೂ ಸುಧಾರಿಸಿದ್ದಾರೆ.ಕಲಿಯಲು ಹತ್ತಿದ್ದಾರೆ. ನಮ್ಮ ಹಾಗೆ ಊರಿಂದೂರಿಗೆ ತಿರುಗುವರ ಸಂಖ್ಯೆ ಕಡಿಮೆಯಾಗಿದೆ.ಈಗ ಕಂಪ್ಯೂಟರ್ ನೆರವಿನಿಂದ ದಾಖಲೆಗಳನ್ನು ಜೋಪಾನವಾಗಿಡುವ ವ್ಯವಸ್ಥೆ ಇದೆ. ತಮ್ಮ ಕುಲ ಕಸಬಿನ ಬಗ್ಗೆ ಹೆಳವರಿಗೆ ಈಗ ಕಾಳಜಿ ನಿಧಾನವಾಗಿ ಕರಗುತ್ತಿದೆ. ಜೊತೆಗೆ ದಾಖಲೆಗಳು ಕೂಡಾ.
*ಗುರು.ಕೆ.ಪಟ್ಟಣಶೆಟ್ಟಿ.ಕಲಬುರಗಿ