ವಂದೇ ಭಾರತ್ ರೈಲು ನಿಲುಗಡೆ ಕೋರಿದ್ದ ಅರ್ಜಿ ವಜಾ

ಕೇರಳ, ಜೂ.೧೮-ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್‌ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆಗೆ ಅವಕಾಶ ನೀಡುವಂತೆ ದಕ್ಷಿಣ ರೈಲ್ವೆಗೆ ನಿರ್ದೇಶನ ನೀಡುವಂತೆ ಕೇರಳ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈ ಅಸಾಮಾನ್ಯ ಮನವಿಯಿಂದ ತೀವ್ರ ಅಸಮಾಧಾನಗೊಂಡ ಸುಪ್ರೀಂ ಕೋರ್ಟ್ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.
ಅರ್ಜಿಯಿಂದ ಗರಂ ಆದ ನ್ಯಾಯಮೂರ್ತಿಗಳು ಅರ್ಜಿದಾರರ ವಿರುದ್ಧ ವಾಗ್ದಾಳಿ ನಡೆಸಿದರು.ನೀವು ಸುಪ್ರೀಂ ಕೋರ್ಟ್ ಅನ್ನು ಅಂಚೆ ಕಚೇರಿಯನ್ನಾಗಿ ಮಾಡಿದ್ದಾರೆ ಎಂದು ಹೇಳಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ಪೀಠವು ೩೯ ವರ್ಷದ ಕೇರಳದ ವಕೀಲರು ತಮ್ಮ ತವರು ಜಿಲ್ಲೆಯ ತಿರೂರ್‌ನಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆಯನ್ನು ನಿಗದಿಪಡಿಸಲು ನ್ಯಾಯಾಲಯದ ಆದೇಶವನ್ನು ಕೋರಿ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿ ವಂದೇ ಭಾರತ್ ರೈಲು ಎಲ್ಲಿ ನಿಲ್ಲುತ್ತದೆ ಎಂಬುದನ್ನು ನಾವು ನಿರ್ಧರಿಸಬೇಕೆಂದು ನೀವು ಬಯಸುತ್ತೀರಾ.. ನಾವು ಮುಂದೆ ದೆಹಲಿ – ಮುಂಬೈ ರಾಜಧಾನಿ ನಿಲ್ದಾಣವನ್ನು ನಿಗದಿಪಡಿಸಬೇಕೇ..? ಇದು ನೀತಿ ವಿಷಯವಾಗಿದೆ, ಅಧಿಕಾರಿಗಳ ಬಳಿಗೆ ಹೋಗಿ ಈ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳಿ ಎಂದು ಸಿಜೆಐ ಅರ್ಜಿದಾರರಿಗೆ ಚಾಟಿ ಬೀಸಿದ್ದಾರೆ.
ಆದಾಗ್ಯೂ, ಈ ಪ್ರಾತಿನಿಧ್ಯವನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಕನಿಷ್ಠ ಸರ್ಕಾರವನ್ನು ಕೇಳಬೇಕು ಎಂದು ಅರ್ಜಿದಾರರು ವಾದಿಸಿದರು, ಆದರೆ ಸಿಜೆಐ ಅವರು ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದರು. ಹೊಸ ’ವಂದೇ ಭಾರತ’ಕ್ಕೆ ತಿರೂರ್‌ನಲ್ಲಿ ನಿಲುಗಡೆ ನೀಡಲು ಉದ್ದೇಶಿಸಲಾಗಿತ್ತು ಆದರೆ ಯಾವುದೇ ಕಾರಣವಿಲ್ಲದೆ ನಿಲುಗಡೆ ನೀಡಲಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಮಲಪ್ಪುರಂ ಜಿಲ್ಲೆ ಜನನಿಬಿಡ ಪ್ರದೇಶವಾಗಿದ್ದು, ಅನೇಕ ಜನರು ತಮ್ಮ ಪ್ರಯಾಣದ ಉದ್ದೇಶಕ್ಕಾಗಿ ರೈಲು ಸೇವೆಗಳನ್ನು ಅವಲಂಬಿಸಿದ್ದರೂ, ಜಿಲ್ಲೆಗೆ ನಿಲುಗಡೆ ನೀಡಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ತಿರೂರ್ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡದಿರುವುದು ಮಲಪ್ಪುರಂ ಜನತೆಗೆ ಮಾಡುತ್ತಿರುವ ಅನ್ಯಾಯ. ಆದ್ದರಿಂದ, ತಮ್ಮ ಕೋರಿಕೆ ಮತ್ತು ಬೇಡಿಕೆಗಳನ್ನು ನಿರ್ಲಕ್ಷಿಸುವುದು ಪೂರ್ವಾಗ್ರಹಕ್ಕೆ ಕಾರಣವಾಗುತ್ತದೆ ಎಂದು ಅವರು ವಾದಿಸಿದ್ದಾರೆ.
ರೈಲಿಗೆ ನೀಡಬೇಕಾದ ನಿಲುಗಡೆಗಳು ರೈಲ್ವೇ ನಿರ್ಧರಿಸಬೇಕಾದ ವಿಷಯವಾಗಿದೆ. ನಿರ್ದಿಷ್ಟ ರೈಲು ನಿರ್ದಿಷ್ಟ ನಿಲ್ದಾಣದಲ್ಲಿ ನಿಲ್ಲಬೇಕು ಎಂದು ಒತ್ತಾಯಿಸಲು ಯಾವುದೇ ವ್ಯಕ್ತಿಗೆ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರತಿ ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿ ಅಥವಾ ಸಾರ್ವಜನಿಕ ಹಿತಾಸಕ್ತಿವುಳ್ಳ ವ್ಯಕ್ತಿಯು ತನ್ನ ಆಯ್ಕೆಯ ರೈಲು ತಾನು ಬಯಸಿದ ನಿರ್ದಿಷ್ಟ ನಿಲ್ದಾಣದಲ್ಲಿ ನಿಲ್ಲಿಸಲು ಒತ್ತಾಯಿಸಲು ಪ್ರಾರಂಭಿಸಿದರೆ, ಹೈಸ್ಪೀಡ್ ರೈಲುಗಳನ್ನು ಸ್ಥಾಪಿಸುವ ಉದ್ದೇಶವೇ ಕಳೆದುಹೋಗುತ್ತದೆ. ವಂದೇ ಭಾರತ್ ರೈಲಿನಂತಹ ಹೈ ಸ್ಪೀಡ್ ಎಕ್ಸ್‌ಪ್ರೆಸ್ ರೈಲುಗಳಿಗೆ ವೈಯಕ್ತಿಕ ಅಥವಾ ಪಟ್ಟಭದ್ರ ಹಿತಾಸಕ್ತಿಗಳ ಆಧಾರದ ಮೇಲೆ ರೈಲ್ವೆ ನಿಲ್ದಾಣಗಳನ್ನು ನೀಡಲಾಗುವುದಿಲ್ಲ. ಸಾರ್ವಜನಿಕರ ಬೇಡಿಕೆಯ ಮೇರೆಗೆ ನಿಲುಗಡೆ ನೀಡಿದರೆ, ಎಕ್ಸ್‌ಪ್ರೆಸ್ ರೈಲು ಎಂಬ ಪದವೇ ತಪ್ಪಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ರೈಲ್ವೇ ರೈಲುಗಳಿಗೆ ನಿಲುಗಡೆ ನೀಡುವ ವಿಷಯದಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸುವಂತಿಲ್ಲ ಮತ್ತು ಇದು ಸಂಪೂರ್ಣವಾಗಿ ರೈಲ್ವೇಯ ವಿವೇಚನೆ ಮತ್ತು ಅಧಿಕಾರ ವ್ಯಾಪ್ತಿಯಲ್ಲಿದೆ ಎಂಬ ಅಭಿಪ್ರಾಯದಲ್ಲಿ ಎರ್ನಾಕುಲಂನಲ್ಲಿರುವ ಕೇರಳದ ಹೈಕೋರ್ಟ್ ಈ ಹಿಂದೆ ಅರ್ಜಿಯನ್ನು ವಜಾಗೊಳಿಸಿತ್ತು.