ವಂಚನೆ ಮೋಸಕ್ಕೆ ಮರುಳಾಗಬೇಡಿ-ಎಚ್.ಡಿ.ದೇವೇಗೌಡ

ಮಂಡ್ಯ : ವಂಚನೆ ಮೋಸಕ್ಕೆ ಮರುಳಾಗಬೇಡಿ, ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಮತನೀಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ಕೆ.ಎಂ.ದೊಡ್ಡಿಯಲ್ಲಿ ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ಅವರ ಪರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಮೋಸ, ವಂಚನೆ ಮಾಡುವಂತ ವ್ಯಕ್ತಿಗಳ ಬಗ್ಗೆ ನಾವು ಮಾತನಾಡುವುದು ಬೇಡ, ಅಂತಹವರ ಹೆಸರನ್ನು ಸೂಚಿಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಉದಯ್ ಮತ್ತು ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಅವರ ಬಗ್ಗೆ ಕುಟುಕಿದರು.
ಡಿ.ಸಿ.ತಮ್ಮಣ್ಣ ಅವರು ನೀರಾವರಿ, ಶಿಕ್ಷಣ, ಕೈಗಾರಿಕೆ, ರಸ್ತೆ ಅಭಿವೃದ್ದಿ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳನ್ನು ಕ್ಷೇತ್ರದಲ್ಲಿ ನೀಡಿದ್ದಾರೆ. ಡಿ.ಸಿ.ತಮ್ಮಣ್ಣ ಅವರು ತಮ್ಮ ಅಂತರಾಳದ ಮಾತುಗಳನ್ನಾಡಿದ್ದಾರೆ. ಕೆಲವರನ್ನು ರಾಜಕೀಯಕ್ಕೆ ಕರೆತಂದು ಬೆಳೆಸಿದ ಮೇಲೆ ಅವರನ್ನೇ ಕುಟುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲವರಿಂದ ಸಾಕಷ್ಟು ನೋವುತಿಂದಿದ್ದಾರೆ. ಕ್ಷೇತ್ರದ ಅಭಿವೃದ್ದಿಗಾಗಿ ಶ್ರಮಿಸಿದ್ದಾರೆ. ಅವರ ಅಂತರಾಳವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅದನ್ನು ಅರ್ಥಮಾಡಿಕೊಂಡು ವಿಧಾನ ಸಭೆಗೆ ಕಳುಹಿಸಿಕೊಡುವುದು ಕ್ಷೇತ್ರದ ಜನರ ಜವಾಬ್ದಾರಿ ಎಂದರು.
ದೈವದ ಅನುಗ್ರಹದ ಮೇಲೆ ಮದ್ದೂರಿಗೆ ಬಂದಿದ್ದೇನೆ : ಎಚ್‌ಡಿಡಿ
ಮದ್ದೂರಿನ ಬಹಿರಂಗ ಸಭೆಗೆ ಬರಬೇಕೆಂದು ಶಿಡ್ಲಘಟ್ಟದಿಂದ ಮಧ್ಯಾಹ್ನ 1 ಗಂಟೆಯಲ್ಲೇ ಹೊರಟ್ಟಿದ್ದೆ. ಆದರೆ ಪೈಲೆಟ್ ಒಂದು ಷರತ್ತನ್ನ ಹಾಕಿದ್ರು. ದಾರಿ ಮಧ್ಯೆ ಏನಾದರೂ ಹವಮಾನ ಏರುಪೇರಾದರೆ ಶಿಡ್ಲಘಟ್ಟಕ್ಕೆ ವಾಪಸ್ ಬರುತ್ತೇನೆಂದು ಹೇಳಿದ್ರು. ಆದರೆ ದೈವದ ಬಲ ಎಲ್ಲೂ ಏನೂ ಸಮಸ್ಯೆಯಾಗಿಲ್ಲ. ದೈವದ ಅನುಗ್ರಹದಿಂದ ಮದ್ದೂರಿಗೆ ಬಂದಿದ್ದೇನೆ ಎಂದರು.
ಕಾಂಗ್ರೆಸ್ ನಂಬಿ ಯಾಮಾರಿದ್ದೇವೆ :
ಕಾಂಗ್ರೆಸ್ ಟಿಕೆಟ್ ವಂಚಿತ ಅಭ್ಯರ್ಥಿ ಎಸ್.ಗುರುಚರಣ್ ಮಾತನಾಡಿ, ಕಾಂಗ್ರೆಸ್ ಪಕ್ಷ ಕ್ರಿಮಿನಲ್ ಮೊಖದ್ದಮೆ ಇರುವ ವ್ಯಕ್ತಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರು ಅಫಿಡವಿಟ್‌ನಲ್ಲಿ ಬಹಿರಂಗಗೊಂಡಿದೆ. ನಾವು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದಿದ್ದೇವೆ. ನಿಮಗೆ ಟಿಕೆಟ್ ನೀಡುತ್ತೇವೆಂದು ವಂಚಿಸಿ ಯಾಮಾರಿಸಿ ಕೊನೆಯಲ್ಲಿ ಕ್ರಿಮಿನಲ್ ಮೊಖದ್ದಮೆ ಇರುವ ವ್ಯಕ್ತಿಗೆ ನೀಡಿದ್ದಾರೆ. ಇದರಿಂದ ಬೇಸರಗೊಂಡು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಹೈಕಮಾಂಡ್ ನೋಡಲು ದೆಹಲಿಗೆ ಹೋಗಬೇಕು. ಆದರೆ ಜೆಡಿಎಸ್‌ನಲ್ಲಿ ನಮ್ಮ ರಾಜ್ಯದಲ್ಲೇ ಸ್ಥಳೀಯವಾಗಿ ಸಿಗುತ್ತಾರೆ. ಇದು ಸ್ವಾಭಿಮಾನದ ಚುನಾವಣೆಯಾಗಿದೆ ಎಂದರು.
ಜೆಡಿಎಸ್ ಅಭ್ಯರ್ಥಿ ಶಾಸಕ ಡಿ.ಸಿ.ತಮ್ಮಣ್ಣ ಅವರು ಮಾತನಾಡಿ, ಈ ಹಿಂದೆ ನಮ್ಮ ಪಕ್ಷದಿಂದಲೇ ಜಿ.ಪಂ ಸದಸ್ಯರಾಗಿ, ಅಧ್ಯಕ್ಷರಾಗಿ ಇಂದು ನಮ್ಮ ವಿರುದ್ದ ತಿರುಗಿ ಬಿದ್ದಿದ್ದಾರೆ. ಅಧ್ಯಕ್ಷರಾಗಬೇಕಾದರೆ ನಾನು ಮತ್ತು ದೇವೇಗೌಡರು ಬೇಕಾಗಿತ್ತು. ಷರತ್ತಿನ ಮೇಲೆ ಅಧ್ಯಕ್ಷರಾಗಿದ್ದರು. ರಾಜಿನಾಮೆ ಕೇಳಿದ ಮೇಲೆ ಅವರ ಬಣ್ಣ ಬಯಲಾಯಿತು. ಈಗ ನಮ್ಮ ವಿರುದ್ದ ಎದುರಾಳಿಯಾಗಿ ಬಿಜೆಪಿಯಿಂದ ಸ್ಪರ್ಧೆಮಾಡಿದ್ದಾರೆ. ಎರಡುವರೆ ವರ್ಷದ ಜಿಲ್ಲಾಪಂಚಾಯಿತಿ ಅಧ್ಯಕ್ಷರ ಅವಧಿಯಲ್ಲಿ ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆಂದು ಪ್ರಶ್ನೆಮಾಡಿ ಎಂದರು.
ವೇದಿಕೆ ಮೇಲೆ ಕಾಣಿಸಿಕೊಂಡ ಕಲ್ಪನಾ :
ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರು ವಿಧಾನಸಭೆ ಚುನಾವಣೆಯಿಂದ ದೂರ ಉಳಿದು ಯಾವುದೇ ಪ್ರಚಾರಕ್ಕೆ ಬರದೆ ತಟಸ್ಥರಾಗಿದ್ದರು. ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕೆ.ಎಂ.ದೊಡ್ಡಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಜೆಡಿಎಸ್ ಬಹಿರಂಗ ಸಭೆಯ ವೇದಿಕೆ ಮೇಲೇರಿದ್ದರಿಂದ ಜೆಡಿಎಸ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತು

.
ನಂತರ ಕಲ್ಪನಾಸಿದ್ದರಾಜು ಮಾತನಾಡಿ, ಎಚ್.ಡಿ.ದೇವೇಗೌಡ ಅಪ್ಪಾಜಿ ಅವರ ಅಭಿಮಾನ ನಿಮ್ಮೆಲ್ಲರ ಮೇಲಿರಲಿ. ಶಾಸಕ ಡಿ.ಸಿ.ತಮ್ಮಣ್ಣ ಅವರನ್ನು ಕ್ಷೇತ್ರದಿಂದ ಆಯ್ಕೆಗೊಳಿಸಿಕೊಡಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಜಫ್ರುರ್‌ಹುಲ್ಲಾ ಖಾನ್, ಮುಖಂಡರಾದ ಸಂತೋಷ್‌ತಮ್ಮಣ್ಣ, ಸೌಮ್ಯರಮೇಶ್, ಕವಿತಾಸಂತೋಷ್, ಡಿ.ರಮೇಶ್, ಚಿಕ್ಕತಿಮ್ಮೇಗೌಡ, ಹನುಮಂತೇಗೌಡ, ಕೆ.ಪಿ.ದೊಡ್ಡಿ ಶಿವರಾಮು, ಮಾದನಾಯಕನಹಳ್ಳಿ ರಾಜಣ್ಣ, ಎ.ಟಿ.ಬಲ್ಲೇಗೌಡ, ಕೆ.ಟಿ.ಸುರೇಶ್, ಆಲಭುಜನಹಳ್ಳಿ ಚಂದ್ರಶೇಖರ್, ದೇವರಹಳ್ಳಿ ವೆಂಕಟೇಶ್ ಸೇರಿದಂತೆ ಹಲವರಿದ್ದರು.