ವಂಚನೆ ಪ್ರಕರಣ: ಶಾಸಕ ಕಮರುದ್ದೀನ್ ಬಂಧನ

ಮಂಜೇಶ್ವರ, ನ.೮- ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್‌ರನ್ನು ಬಂಧಿಸಲಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಸಾಕಷ್ಟು ದೂರುಗಳು ಲಭಿಸಿದ್ದು, ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ಇದೀಗ ಕಮರುದ್ದೀನ್‌ರನ್ನು ಬಂಧಿಸಿದ್ದಾರೆ.

ನಿನ್ನೆ ಬೆಳಗ್ಗೆಯಿಂದ ವಿಶೇಷ ತನಿಖಾ ತಂಡ ಜಿಲ್ಲಾ ಪೊಲೀಸ್ ಕೇಂದ್ರದಲ್ಲಿ ವಿಚಾರಣೆ ನಡೆಸಿತ್ತು. ವಿಚಾರಣೆಯ ಬಳಿಕ ಸಂಜೆ ನಾಲ್ಕು ಗಂಟೆ ಸುಮಾರಿಗೆ ಕಮರುದ್ದೀನ್‌ರನ್ನು ಬಂಧಿಸಿರುವುದಾಗಿ ಎ. ಎಸ್.ಪಿ ವಿವೇಕ್ ಕುಮಾರ್ ತಿಳಿಸಿದರು. ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್ ಕಂಪೆನಿ ಹೆಸರಿನಲ್ಲಿ  ಸುಮಾರು ೧೨೦ ಕೋಟಿ ರೂ. ಗಳಷ್ಟು ವಂಚನೆ ನಡೆದಿದ್ದು, ಸುಮಾರು ೭೦೦ ಮಂದಿಯಿಂದ ಠೇವಣಿ ಪಡೆಯಲಾಗಿದೆ. ಈ ಪೈಕಿ ೧೧೫ ಪ್ರಕರಣಗಳು ಈಗಾಗಲೇ ದಾಖಲಾಗಿದ್ದು, ೧೫ಕೋಟಿ ರೂ. ಗಳ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಚಂದೇರ, ಕಾಸರಗೋಡು, ಪಯ್ಯನ್ನೂರು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ನಾಲ್ಕು ಪ್ರಕರಣಗಳಲ್ಲಿ ಕಮರುದ್ದೀನ್‌ರನ್ನು ಬಂಧಿಸಲಾಗಿದೆ. ಅಲ್ಲದೆ ಕಂಪೆನಿಯ ಮೆನೇಜಿಂಗ್ ಡೈರಕ್ಟರ್ ಟಿ .ಕೆ ಪೂಕೋಯ ತಂಘಳ್‌ನನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವರ್ಷದ ಹಿಂದೆಯೇ ಠೇವಣಿ ವಂಚನೆ ಪ್ರಕರಣದ ಬಗ್ಗೆ ಚಂದೇರ ಪೊಲೀಸರಿಗೆ ದೂರು ಬಂದಿತ್ತು. ಆದರೆ ಈ ಬಗ್ಗೆ ತನಿಖೆ ನಡೆದಿರಲಿಲ್ಲ. ಇದೀಗ ಶಾಸಕ ಕಮರುದ್ದೀನ್‌ರನ್ನು ಬಂಧಿಸಲಾಗಿದೆ. ವಂಚನೆ ಬೆಳಕಿಗೆ ಬಂದ ಸಂದರ್ಭದಲ್ಲಿ ಠೇವಣಿದಾರರಿಗೆ ಹಣವನ್ನು ಮರಳಿಸುವ ಬಗ್ಗೆ ಪಕ್ಷವು ಸಭೆಯನ್ನು ಕರೆದು ತೀರ್ಮಾನಕ್ಕೆ ಬಂದಿತ್ತು. ಇದರಂತೆ ಜುವೆಲ್ಲರಿಯ ಸೊತ್ತನ್ನು ಮಾರಾಟ ಮಾಡಿ ಹಣವನ್ನು ಠೇವಣಿದಾರರಿಗೆ ನೀಡುವಂತೆ ಪಕ್ಷದ ರಾಜ್ಯ ನಾಯಕತ್ವ ಶಾಸಕರಿಗೆ ನಿರ್ದೇಶನ ನೀಡಿತ್ತು. ಈ ಬಗ್ಗೆ ಮಾಹಿತಿ

ಕಲೆ ಹಾಕಿ ವರದಿ ನೀಡಲು ಪಕ್ಷದ ಜಿಲ್ಲಾ ಕೋಶಾಧಿಕಾರಿ ಮಾಹಿನ್ ಹಾಜಿಯವರಿಗೆ ಜವಾಬ್ದಾರಿ ನೀಡಿತ್ತು. ಆದರೆ ಸುಮಾರು ೭೦೦ ರಷ್ಟು ಮಂದಿಗೆ ೧೨೦ ಕೋಟಿ ರೂ. ನೀಡಬೇಕಾಗಿದ್ದು, ಜುವೆಲ್ಲರಿ ಆಸ್ತಿ ಕೇವಲ ಹತ್ತು ಕೋಟಿ ರೂ. ಮಾತ್ರ ಇರುವ ಬಗ್ಗೆ ಮಾಹಿನ್ ಹಾಜಿ ರಾಜ್ಯ ಸಮಿತಿಗೆ ವರದಿ ನೀಡಿದ್ದರು. ಇದರಿಂದ ಠೇವಣಿದಾರರಿಗೆ ಹಣ ಮರಳಿಸಲು ಅಸಾಧ್ಯವಾಗಿದ್ದು, ಪಕ್ಷವು ಕಮರುದ್ದೀನ್ ಕಾರ್ಯವೈಖರಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತ್ತು.