ವಂಚನೆ ಪ್ರಕರಣ : ನಟಿ ನೋರಾ ಫತೇಹಿ ಮತ್ತೆ ವಿಚಾರಣೆ

ನವದೆಹಲಿ, ಸೆ ೩- ೨೦೦ ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕ ಸುಖೇಶ್ ಚಂದ್ರಶೇಖರ್ ಈಗಾಗಲೇ ಜೈಲಿನಲ್ಲಿದ್ದಾರೆ. ಈ ಸಂಬಂಧ ಬಾಲಿವುಡ್ ನಟಿ ನೋರಾ ಫತೇಹಿ ಅವರು ಮತ್ತೆ ವಿಚಾರಣೆ ಎದುರಿಸಿದ್ದಾರೆ.

ನಟಿ ನೋರಾ ಫತೇಹಿ ಅವರನ್ನು ದೆಹಲಿ ಪೊಲೀಸರು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ವಿಚಾರಣೆಯು ಸುಲಿಗೆ ಪ್ರಕರಣದ ಹಣದ ಜಾಡು ಇಡಿಯ ಚಾರ್ಜ್ ಶೀಟ್‌ನ ಭಾಗವಾಗಿದೆ.

ಅಕ್ರಮ ಹಣ ವರ್ಗಾವಣೆ ಶಂಕೆಯ ಮೇಲೆ ಜಾರಿ ನಿರ್ದೇಶನಾಲಯವು ಈ ಹಿಂದೆ ಸುಕೇಶ್ ಚಂದಶೇಖರ್ ಮತ್ತು ಶ್ರೀಮತಿ ಫತೇಹಿ ಅವರನ್ನು ಒಟ್ಟಿಗೆ ಪ್ರಶ್ನಿಸಿತ್ತು.

ಉದ್ಯಮಿಗಳಿಗೆ ೨೦೦ ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ನೋರಾ ಫತೇಹಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜತೆ ಅವರು ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

ಇನ್ನು ಪ್ರಕರಣದಲ್ಲಿ ಬಾಲಿವುಡ್‌ನಟಿ ಜಾಕ್ವೆಲಿನ್ ಫೆರ್ನಾಂಡಿಸ್‌ಗೆ ದೆಹಲಿ ನ್ಯಾಯಾಲಯ ಇತ್ತೀಚೆಗೆ ಸಮನ್ಸ್ ಜಾರಿ ಮಾಡಿತ್ತು. ೨೦೦ ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಆಗಿರುವ ಜಾಕ್ವೆಲಿನ್‌ಗೆ ಸೆಪ್ಟೆಂಬರ್ ೨೬ರ ಒಳಗೆ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.