ವಂಚನೆ ಪ್ರಕರಣ ಟ್ರಂಪ್ ಹೇಳಿಕೆಗೆ ಅವಕಾಶವಿಲ್ಲ

ನ್ಯೂಯಾರ್ಕ್, ಜ.೧೧- ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ತಮ್ಮ ನಾಗರಿಕ ವಂಚನೆ ಪ್ರಕರಣದ ವಿಚಾರಣೆಯ ಮುಕ್ತಾಯದ ದಿನದಂದು ಹೇಳಿಕೆ ನೀಡಲು ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನ್ಯಾಯಾಧೀಶರು ಅವಕಾಶ ನಿರಾಕರಿಸಿದ್ದಾರೆ.
ಪ್ರಕರಣದ ಅಂತಿಮ ದಿನದಂದು ಟ್ರಂಪ್ ಪ್ರತಿಕ್ರಿಯೆ ನೀಡುವ ಬಗ್ಗೆ ಊಹಾಪೋಹಗಳು ಹರಡಿದ್ದವು. ಆದರೆ ಸದ್ಯ ಇದಕ್ಕೆ ಸಂಬಂಧಿಸಿದ ಎಲ್ಲಾ ಊಹಾಪೋಹಗಳಿಗೆ ನ್ಯಾಯಾಧೀಶರಾದ ಆರ್ಥರ್ ಎಂಗೊರಾನ್ ಅವರು ಅಂತ್ಯ ಹಾಡಿದ್ದಾರೆ. ನ್ಯಾಯಾಧೀಶರು ಇದಕ್ಕೆ ಸಂಬಂಧಿಸಿದ ಇ-ಮೇಲ್‌ಗಳನ್ನು ಹಂಚಿಕೊಳ್ಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಇನ್ನು ಮೆಲಾನಿಯಾ ಟ್ರಂಪ್ (ಟ್ರಂಪ್ ಪತ್ನಿ) ಅವರ ತಾಯಿ ವಿಧಿವಶರಾದ ಹಿನ್ನೆಲೆಯಲ್ಲಿ ಗುರುವಾರದ ವಿಚಾರಣೆಯನ್ನು ಮುಂದೂಡುವಂತೆ ಟ್ರಂಪ್ ಪರ ವಕೀಲರು ನ್ಯಾಯಾಧೀಶರಲ್ಲಿ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ಪುರಸ್ಕರಿಸಲು ನ್ಯಾಯಾಧೀಶರು ನಿರಾಕರಿಸಿದ್ದು, ಕ್ಷಮಿಸಿ, ಯೋಜನೆಗಳು ಮತ್ತು ವೇಳಾಪಟ್ಟಿಗಳನ್ನು ಈಗಾಗಲೇ ಹೊಂದಿಸಲಾಗಿದೆ ಎಂದು ಎಂಗೊರಾನ್ ಅವರು ತಿಳಿಸಿದ್ದಾರೆ. ಇನ್ನು ಟ್ರಂಪ್ ಅವರ ನಾಗರಿಕ ವಂಚನೆ ವಿಚಾರಣೆ ಗುರುವಾರ ನ್ಯೂಯಾರ್ಕ್ ನಗರದಲ್ಲಿ ಪುನರಾರಂಭಗೊಳ್ಳಲಿದೆ. ಎರಡೂ ಕಡೆಯ ವಕೀಲರು ತಮ್ಮ ಮುಕ್ತಾಯದ ವಾದಗಳನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಮಾಜಿ ಅಧ್ಯಕ್ಷ ಟ್ರಂಪ್ ಮತ್ತು ಅವರ ಇಬ್ಬರು ಪುತ್ರರು ಉತ್ತಮ ಸಾಲಗಳನ್ನು ಪಡೆಯುವ ಸಲುವಾಗಿ ತಮ್ಮ ಆಸ್ತಿಗಳ ಮೌಲ್ಯವನ್ನು ನೂರಾರು ಮಿಲಿಯನ್ ಡಾಲರ್‌ಗಳಿಂದ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಸದ್ಯ ಗುರುವಾರ ಪ್ರಕರಣದ ಅಂತಿಮ ವಿಚಾರಣೆ ನಡೆಯಲಿದೆ.