ವಂಚನೆ ಪ್ರಕರಣದ ಆರೋಪಿಯಾಗಿರುವ ಶಾಸಕ ಕಮರುದ್ದೀನ್ ರಾಜೀನಾಮೆಗೆ ಪಕ್ಷದಿಂದಲೇ ಒತ್ತಡ

ಕಾಸರಗೋಡು, ನ.೫- ಹಗರಣಕ್ಕೆ ಸಿಲುಕಿರುವ ಮಂಜೇಶ್ವರ ಶಾಸಕ ಎಂ. ಸಿ ಕಮರುದ್ದೀನ್ ತಮ್ಮ ಸ್ಥಾನವನ್ನು ತೊರೆಯುವಂತೆ ಪಕ್ಷದಿಂದಲೇ ಒತ್ತಡ ತೀವ್ರಗೊಳ್ಳುತ್ತಿದೆ. ಮೂಲಗಳ ಪ್ರಕಾರ ಕಮರುದ್ದೀನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಸ್ಲಿಂ ಲೀಗ್ ಸೂಚನೆ ನೀಡಿದೆ ಎನ್ನಲಾಗಿದೆ.

ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಮರುದ್ದೀನ್ ಶಾಸಕ ಸ್ಥಾನದಲ್ಲಿ ಮುಂದುವರಿಯುವುದು ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲಿದೆ ಎಂಬುವುದು ಪಕ್ಷದಲ್ಲಿ ಈಗಾಗಲೇ ಚರ್ಚೆಗೆ ಕಾರಣವಾಗಿದ್ದು , ಇದರಿಂದ ಕಮರುದ್ದೀನ್ ತಮ್ಮ ಸ್ಥಾನದಲ್ಲಿ ಮುಂದುವರಿಯುವುದು ಸೂಕ್ತವಲ್ಲ ಎಂಬ ನಿಲುವು ಪಕ್ಷದೊಳಗೆ ಕೇಳಿಬರುತ್ತಿದೆ ಎನ್ನಲಾಗಿದೆ.

ಜ್ಯುವೆಲ್ಲರಿಗೆ ಠೇವಣಿ ಪಡೆದು ವಂಚನೆ ನಡೆಸಿದ ಬಗ್ಗೆ ಕಮರುದ್ದೀನ್ ವಿರುದ್ಧ ಈಗಾಗಲೇ ಕ್ರೈಂ ಬ್ರಾಂಚ್ ತನಿಖೆ ಬಿಗುಗೊಳಿಸಿದ್ದು, ಇದರಿಂದ ಶಾಸಕ ಸ್ಥಾನ ಶೀಘ್ರ ತೊರೆಯುವುದು ಉತ್ತಮ ಎಂದು ಮುಸ್ಲಿಂ ಲೀಗ್‌ನಲ್ಲಿ ಅಭಿಪ್ರಾಯ ಕೇಳಿ ಬಂದಿದ್ದು, ಶಾಸಕ ಸ್ಥಾನದಲ್ಲಿ ಮುಂದುವರಿದ್ದಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಲಿದೆ. ಕಮರುದ್ದೀನ್‌ರವರನ್ನು ಪಕ್ಷವು ಸಂಪೂರ್ಣ ಕೈಬಿಟ್ಟಿದ್ದು, ಇದರಿಂದ ಕಮರುದ್ದೀನ್ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಕಮರುದ್ದೀನ್‌ರವರ ಮೇಲೆ ಆರೋಪ ಕೇಳಿ ಬರುತ್ತಿದ್ದಂತೆ ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಹಾಗೂ ಯುಡಿಎಫ್ ಜಿಲ್ಲಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿತ್ತು. ಗಂಭೀರವಾದ ಪ್ರಕರಣಕ್ಕೆ ಸಿಲುಕಿರುವ ಕಮರುದ್ದೀನ್ ಶಾಸಕರಾಗಿ ಮುಂದುವರಿದ್ದಲ್ಲಿ ಪಕ್ಷಕ್ಕೆ ಧಕ್ಕೆ ಉಂಟಾಗಲಿದೆ. ಪ್ರತಿಪಕ್ಷಕ್ಕೆ ಅಸ್ತ್ರವಾಗಿ ಪರಿಣಮಿಸುತ್ತಿದ್ದು,  ಇದರಿಂದ ಶಾಸಕ ಸ್ಥಾನದಲ್ಲಿ ಮುಂದುವರಿಯುವುದು ಸೂಕ್ತವಲ್ಲ ಎಂಬ ನಿಲುವು ಮುಸ್ಲಿಂ ಲೀಗ್ ಹೊಂದಿದೆ.

ಕಳೆದ ದಿನ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿಲುವು ವ್ಯಕ್ತವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ವಂಚನೆ ಬೆಳಕಿಗೆ ಬಂದ ಸಂದರ್ಭದಲ್ಲಿ ಠೇವಣಿದಾರರಿಗೆ ಹಣವನ್ನು ಮರಳಿಸುವ ಬಗ್ಗೆ ಪಕ್ಷವು ಸಭೆಯನ್ನು ಕರೆದು ತೀರ್ಮಾನಕ್ಕೆ ಬಂದಿತ್ತು.

ಇದರಂತೆ ಜ್ಯುವೆಲ್ಲರಿಯ ಸೊತ್ತನ್ನು ಮಾರಾಟ ಮಾಡಿ ಹಣವನ್ನು ಠೇವಣಿದಾರರಿಗೆ ನೀಡುವಂತೆ ಪಕ್ಷದ ರಾಜ್ಯ ನಾಯಕತ್ವ ಶಾಸಕರಿಗೆ ನಿರ್ದೇಶನ ನೀಡಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿ ವರದಿ ನೀಡಲು ಪಕ್ಷದ ಜಿಲ್ಲಾ ಕೋಶಾಧಿಕಾರಿ ಮಾಹಿನನ್ ಹಾಜಿಯವರಿಗೆ ಜವಾಬ್ದಾರಿ ನೀಡಿತ್ತು.

ಆದರೆ ಸುಮಾರೂ ೭೦೦ ರಷ್ಟು ಮಂದಿಗೆ ೧೩೦ ಕೋಟಿ ರೂ. ನೀಡಬೇಕಾಗಿದ್ದು, ಜ್ಯುವೆಲ್ಲರಿ ಆಸ್ತಿ ಕೇವಲ ಹತ್ತು ಕೋಟಿ ರೂ. ಮಾತ್ರ ಇರುವ ಬಗ್ಗೆ ಮಾಹಿನ್ ಹಾಜಿ ರಾಜ್ಯ ಸಮಿತಿಗೆ ವರದಿ ನೀಡಿತ್ತು. ಇದರಿಂದ ಪಕ್ಷವು ಎಂ. ಸಿ ಕಮರುದ್ದೀನ್‌ರವರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಎಲ್ಲಾ ಹೊರೆಯನ್ನು ಕಮರುದ್ದೀನ್‌ರವರೆ ಹೊರಿಸಲಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಜ್ಯುವೆಲ್ಲರಿ ಅಧ್ಯಕ್ಷ ಕಮರುದ್ದೀನ್, ಮೆನೇಜಿಂಗ್ ಡೈರಕ್ಟರ್ ಟಿ. ಕೆ ಪೂಕೋಯ ತಂಘಳ್ ಭಾರೀ ಪ್ರಮಾಣದ ಅವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿದ್ದು, ಇದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.