ಮಂಗಳೂರು,ಸೆ.೧೪:ಹಿಂದೂ ಸಂಘಟನೆಯ ಮುಖ್ಯಸ್ಥೆ ಚೈತ್ರಾ ಕುಂದಾಪುರ ಅವರ ವಂಚನೆ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ, ಈ ಪ್ರಕರಣದ ಸಮಗ್ರ ತನಿಖೆ ಆಗಬೇಕು. ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಸಮಗ್ರ ತನಿಖೆಯಾಗಲಿ ಸ್ವಾಮೀಜಿ ಅಲ್ಲ ಯಾರೇ ಈ ಪ್ರಕರಣದಲ್ಲಿದ್ದರೂ ಅವರ ಬಂಧನ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಬೇಕು ಎಂದರು.
ಬಿಜೆಪಿ ಟಿಕೆಟ್ ಕೊಡಿಸುತ್ತೇವೆ ಎಂದು ಹಣ ಪಡೆದಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಬಿಜೆಪಿಗೂ ಇದಕ್ಕೂ ಸಂಬಂಧವಿಲ್ಲ, ತನಿಖೆಯಾಗಿ ಸತ್ಯ ಹೊರ ಬರಲಿ ಎಂದರು.
ಮೈತ್ರಿ ಅಂತಿಮವಾಗಿಲ್ಲ
ಬಿಜೆಪಿ-ಜೆಡಿಎಸ್ ಮೈತ್ರಿ ಅಂತಿಮವಾಗಿಲ್ಲ. ಪ್ರಾಥಮಿಕ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಮೈತ್ರಿ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ. ತೀರ್ಮಾನಕ್ಕೂ ಮೊದಲು ನಮ್ಮ ಜತೆ ಚರ್ಚೆ ನಡೆಸುತ್ತಾರೆ ಎಂದು ಹೇಳಿದ ಬೊಮ್ಮಾಯಿ, ಈವರೆಗಿನ ಮಾತುಕತೆ ನಮ್ಮ ಅಭಿಪ್ರಾಯ ಪಡೆಯವ ಹಂತಕ್ಕೆ ಇನ್ನೂ ಬಂದಿಲ್ಲ ಎಂದರು.