ವಂಚನೆಗೊಳಗಾದ ಉಪನ್ಯಾಸಕಿ ಬಾವಿಗೆ ಹಾರಿ ಆತ್ಮಹತ್ಯೆ

ಬೀದರ್: ನ.11:ಆನ್ಲೈನ್ ನಲ್ಲಿ ಹೂಡಿಕೆಯ ವಂಚನೆಗೊಳಗಾದ ಬೀದರ್ ಜಿಲ್ಲೆ ಬಸವಕಲ್ಯಾಣದ ಉಪನ್ಯಾಸಕಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಆರತಿ ಕನಾಟೆ(28) ಆತ್ಮಹತ್ಯೆ ಮಾಡಿಕೊಂಡವರು.

2.5 ಲಕ್ಷ ರೂಪಾಯಿ ಕಳೆದುಕೊಂಡ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ನಲ್ಲಿ ಈ ವಿಚಾರ ಬರೆದಿಟ್ಟಿದ್ದಾರೆ.

ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದ ಆರತಿ ಕನಾಟೆ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಪಾರ್ಟ್ ಟೈಮ್ ಉದ್ಯೋಗದ ಹೆಸರಿನಲ್ಲಿ ಸಂದೇಶ ಬಂದಿದೆ. ಆನ್ಲೈನ್ ಮೂಲಕ ಪರಿಚಿತನಾದ ವ್ಯಕ್ತಿ ನೋಂದಣಿ ಇತರೆ ಪ್ರಕ್ರಿಯೆಗಳಿಗೆ ಹೂಡಿಕೆಯ ಮೊದಲ ಕಂತಾಗಿ ಒಂದು ಸಾವಿರ ರೂಪಾಯಿ ಪಡೆದುಕೊಂಡಿದ್ದಾನೆ. ನಂತರ ಹಂತ ಹಂತವಾಗಿ ಎರಡು ಲಕ್ಷ ರೂ.ಗೂ ಅಧಿಕ ಹಣ ಪಡೆದುಕೊಂಡಿದ್ದು, ಮತ್ತೆ 80,000 ಹೂಡಿಕೆ ಮಾಡಿದರೆ ಎಲ್ಲಾ ಹಣ ವಾಪಸ್ ಬರುತ್ತದೆ ಎಂದು ತಿಳಿಸಿದ್ದಾನೆ.

ಈಗಾಗಲೇ 2.5 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿದ್ದ ಆರತಿ ಅವರಿಗೆ ವಂಚನೆಗೊಳಗಾಗಿರುವುದು ಗೊತ್ತಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ತಂದೆ ಶಿವರಾಜ ಕನಾಟೆ ದೂರು ನೀಡಿದ್ದು, ಬಸವಕಲ್ಯಾಣ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.