ವಂಚನೆಗೆ ಡೊನಾಲ್ಡ್ ಟ್ರಂಪ್ ಹೊಣೆಗಾರ

ನ್ಯೂಯಾರ್ಕ್, ಸೆ.೨೭- ಸುಳ್ಳು ವ್ಯವಹಾರ ಪ್ರಕರಣದ ವಿಚಾರಣೆ ಆರಂಭವಾಗುವ ಮುನ್ನ ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಘಾತ ಕಂಡಿದ್ದಾರೆ. ಟ್ರಂಪ್ ಅವರು ತಮ್ಮ ನೂರಾರು ದಶಲಕ್ಷ ಡಾಲರ್ ಸಂಪತ್ತಿನ ವಿಚಾರದಲ್ಲಿ ಬ್ಯಾಂಕ್ ಹಾಗೂ ವಿಮೆದಾರರಿಗೆ ಸುಳ್ಳು ಮಾಹಿತಿ ನೀಡಿದ್ದು, ಅವರು ವಂಚನೆಗೆ ಹೊಣೆಗಾರರಾಗಿದ್ದಾರೆ ಎಂದು ನ್ಯೂಯಾರ್ಕ್‌ನ ನ್ಯಾಯಾಧೀಶರು ಪ್ರತಿಕ್ರಿಯೆ ನೀಡಿದ್ದಾರೆ.
ಇಲ್ಲಿನ ದಾಖಲೆಗಳು ಪ್ರತಿವಾದಿಗಳು ವ್ಯವಹಾರದಲ್ಲಿ ಬಳಸಿದ ಮೋಸದ ಮೌಲ್ಯಮಾಪನಗಳನ್ನು ಸ್ಪಷ್ಟವಾಗಿ ಒಳಗೊಂಡಿವೆ” ಎಂದು ನ್ಯಾಯಾಧೀಶರು ಬರೆದಿದ್ದಾರೆ. ಅದೂ ಅಲ್ಲದೆ ನ್ಯೂಯಾರ್ಕ್ ನ್ಯಾಯಾಧೀಶರ ಈ ಹೇಳಿಕೆಯು ಟ್ರಂಪ್ ವಿರುದ್ಧ ತನ್ನ ಸಿವಿಲ್ ಮೊಕದ್ದಮೆಯಲ್ಲಿ ನ್ಯೂಯಾರ್ಕ್‌ನ ಅಟಾರ್ನಿ ಜನರಲ್ ಮಾಡಿದ ಪ್ರಮುಖ ಆರೋಪವನ್ನು ಕೂಡ ಸಮರ್ಥಿಸುತ್ತದೆ. ಹಾಗಾಗಿ ಸಹಜವಾಗಿಯೇ ಇದು ಟ್ರಂಪ್‌ಗೆ ಮುಂದಿನ ವಿಚಾರಣೆಯ ವೇಳೆ ದೊಡ್ಡ ಹಿನ್ನಡೆ ತರುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಟ್ರಂಪ್ ಪರ ವಕೀಲರು ನ್ಯಾಯಾಧೀಶರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದೊಂದು ?ನ್ಯಾಯದ ಗರ್ಭಪಾತ? ಎಂದು ತಿಳಿಸಿದ್ದಾರೆ. ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ ಕಳೆದ ಸೆಪ್ಟೆಂಬರ್‌ನಲ್ಲಿ ಟ್ರಂಪ್ ವಿರುದ್ಧ ಮೊಕದ್ದಮೆ ಹೂಡಿದರು. ಟ್ರಂಪ್ ಅವರ ಇಬ್ಬರು ವಯಸ್ಕ ಪುತ್ರರು ಮತ್ತು ಟ್ರಂಪ್ ಸಂಸ್ಥೆ ೨೦೧೧ ಮತ್ತು ೨೦೨೧ ರ ನಡುವೆ ಅವರ ನಿವ್ವಳ ಮೌಲ್ಯ ಮತ್ತು ಆಸ್ತಿ ಮೌಲ್ಯಗಳ ಬಗ್ಗೆ ಸುಳ್ಳು ಹೇಳಿದ್ದಾರೆ ಎಂದು ಲಿಟಿಟಿಯಾ ಅವರು ಆರೋಪಿಸಿದ್ದರು. ಬ್ಯಾಂಕ್ ಸಾಲಗಳು ಮತ್ತು ವಿಮಾ ವ್ಯವಹಾರಗಳ ಮೇಲೆ ಉತ್ತಮ ಷರತ್ತುಗಳನ್ನು ಪಡೆಯಲು ಮತ್ತು ಕಡಿಮೆ ತೆರಿಗೆಯನ್ನು ಪಾವತಿಸಲು ಟ್ರಂಪ್ ಸೇರಿದಂತೆ ಹಲವರು ಸುಳ್ಳು ವ್ಯವಹಾರ ದಾಖಲೆಗಳು ಮತ್ತು ಹಣಕಾಸಿನ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಲಿಟಿಟಿಯಾ ಆರೋಪಿಸಿದ್ದಾರೆ.