ವಂಚಕ ಸ್ವಾಮಿ ಜೊತೆ 8 ನಟಿಯರ ನಂಟು

ಬೆಂಗಳೂರು,ಜ.೯-ಕೋಟ್ಯಾಂತರ ರೂಗಳ ವಂಚನೆ ಆರೋಪ ಎದುರಿಸುತ್ತಿರುವ ಯುವರಾಜ್ ಅಲಿಯಾಸ್ ಸ್ವಾಮಿ ಅವರ ಜೊತೆ ರಾಧಿಕಾ ಕುಮಾರಸ್ವಾಮಿ ಹಣಕಾಸಿನ ವ್ಯವಹಾರ ನಡೆಸಿರುವ ಬೆನ್ನಲ್ಲೇ ವಂಚಕ
ಸ್ವಾಮಿ ಜೊತೆ ಎಂಟಕ್ಕೂ ಹೆಚ್ಚು ನಟಿಯರು ಹಣಕಾಸಿನ ವ್ಯವಹಾರ ನಡೆಸಿರುವ ಮಾಹಿತಿ ಸಿಸಿಬಿ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಕನ್ನಡದ ೮ ಮಂದಿ ನಟಿಮಣಿಯರಿಗೆ ಯುವರಾಜ್ ಗಾಳ ಹಾಕಿರುವುದಾಗಿ ಸಿಸಿಬಿ ವಿಚಾರಣೆ ವೇಳೆ ಗೊತ್ತಾಗಿದೆ.
ವ್ಯವಹಾರ ನಡೆಸಲು ಮುಂದಾದ ನಟಿಯರನ್ನು ಮುಂದಿಟ್ಟುಕೊಂಡು ಕೆಲ ರಾಜಕಾರಣಿಗಳನ್ನು ಸೆಳೆದು ವಂಚನಾ ವ್ಯೂಹ ನಡೆಸಿರುವ ಬಗ್ಗೆ ಸಂಶಯ ವ್ಯಕ್ತವಾಗಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಆರೋಪಿ ಯುವರಾಜ್ ಸ್ವಾಮಿ ನಂಟು ಹೊಂದಿದ್ದ ಎಂಟು ಜನ ನಟಿಮಣಿಯರ ಅಕೌಂಟ್?ಗೆ ಲಕ್ಷ, ಲಕ್ಷ ರೂಗಳನ್ನು ಸಂದಾಯ ಮಾಡಿರುವ ಅನುಮಾನಗಳು ಮೂಡಿದ್ದು ಆತನ ಜಪ್ತಿಮಾಡಿಕೊಂಡ ೪೭ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ.
ಶಾಸ್ತ್ರದ ನೆಪ:
ಜ್ಯೋತಿಷ್ಯ ಹಾಗೂ ರಾಜಕೀಯ ವಲಯದಲ್ಲಿ ಪ್ರಭಾವಿ ವ್ಯಕ್ತಿ ಎಂದು ಬಿಂಬಿಸಿಕೊಂಡಿದ್ದ ಆರೋಪಿ ಯುವರಾಜ್ ಸ್ವಾಮಿ, ಶಾಸ್ತ್ರ ಹೇಳುವ ನೆಪದಲ್ಲಿ ಚಿತ್ರರಂಗದವರ ಸ್ನೇಹ ಮಾಡಿದ್ದಾನೆ.
ಬಳಿಕ ಕೆಲವು ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರಿಗೆ ಸಿನಿಮಾ ನಿರ್ಮಾಣ ಮಾಡುವುದಾಗಿ ಆಸೆ ತೋರಿಸಿದ್ದಾನೆ ಎಂಬುದು ಗೊತ್ತಾಗಿದೆ.
ಯಾವ ಯಾವ ನಟಿಮಣಿಯ ಅಕೌಂಟ್?ಗೆ ಹಣ ಸಂದಾಯ ಆಗಿದೆ? ಯಾರೆಲ್ಲ ಚೆಂದುಳ್ಳಿ ಚೆಲುವೆಯರು ಯುವರಾಜ್ ಸ್ವಾಮಿ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಲು ಹೊರಟಿರುವುದು ಕುತೂಹಲದ ವಿಷಯವಾಗಿದೆ.
ಹಣ ವರ್ಗಾವಣೆ:
ಸ್ಯಾಂಡಲ್ ವುಡ್ ನ ಖ್ಯಾತ ೧೦ ಮಂದಿ ನಟಿಯರಿಗೆ ಹಣ ಸಂದಾಯವಾಗಿದೆ.ಜೊತೆಗೆ ಯುವರಾಜ್ ಹಾಗೂ ಆತನ ಬೇನಾಮಿಗಳಿಂದ ನಟಿಯರಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ಸಿಸಿಬಿ ಅಧಿಕಾರಿಗಳ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಸ್ವಾಮಿಯಿಂದ ಹಣ ಪಡೆದ ಯಾವ ನಟಿಯೂ ಯಾವುದೇ ಸಿನೆಮಾಕ್ಕಾಗಿ ಒಪ್ಪಂದಕ್ಕೆ ಸಹಿಹಾಕಿಲ್ಲ ಎಂಬುದು ತಿಳಿದು ಬಂದಿದೆ.
ಸಿಸಿಬಿ ಬುಲಾವ್:
ಸಿಸಿಬಿ ಪೊಲೀಸರ ತನಿಖೆಯು ತೀವ್ರಗೊಂಡಿರುವುದರಿಂದ ಕನ್ನಡದ ಎಂಟು ಮಂದಿ ನಟಿಮಣಿಯರ ಎದೆಯಲ್ಲಿ ಡವ ಡವ ಶುರುವಾಗಿದೆ.
ಆದರೆ ಯಾವ ಯಾವ ನಟಿಮಣಿಯರಿಗೆ ಸಿಸಿಬಿ ಬುಲಾವ್ ಹೇಳಲಿದೆ ಎನ್ನುವುದು ವಂಚಕ ಸ್ವಾಮಿ ನೀಡಿದ ಹಣದ ಆಧಾರ ಹಾಗೂ ಬ್ಯಾಂಕ್ ಖಾತೆಗಳ ಹಣಕಾಸಿನ ವರ್ಗಾವಣೆಯ ವಿವರಗಳಿಂದ ಗೊತ್ತಾಗಲಿದೆ.