ಲ್ಯಾಪ್ ಟಾಪ್ ಕಳ್ಳಿಯ ಬಂಧನ: 10 ಲಕ್ಷ ಮಾಲು ವಶ

ನಗರದ ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪಿಜಿಗಳಲ್ಲಿ ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿದ್ದ ಓರ್ವ ಮಹಿಳೆಯಿಂದ ವಶಪಡಿಸಿಕೊಂಡಿರುವ ೨೪ ಲ್ಯಾಪ್‌ಟಾಪ್‌ಗಳನ್ನು ಪೊಲೀಸ್ ಆಯುಕ್ತ ಬಿ. ದಯಾನಂದರವರು ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳು ಇದ್ದಾರೆ.

ಬೆಂಗಳೂರು,ಮಾ.೨೬-ಪಿಜಿ ಹಾಸ್ಟೆಲ್ ಗಳಲ್ಲಿ ಲ್ಯಾಪ್ ಟಾಪ್ ಕಳ್ಳತನ ಮಾಡುತ್ತಿದ್ದ ರಾಜಸ್ಥಾನ ಮೂಲದ ಖತರ್ನಾಕ್ ಮಹಿಳೆಯನ್ನು ಬಂಧಿಸುವಲ್ಲಿ ವೈಟ್‌ಫೀಲ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಜಸ್ಥಾನ ಮೂಲದ ಜೇಸು ಅಗರವಾಲ್(೨೯)ಬಂಧಿತ ಮಹಿಳೆಯಾಗಿದ್ದು,ಆಕೆಯಿಂದ ೧೦ ಲಕ್ಷ ರೂ ಮೌಲ್ಯದ ವಿವಿಧ ಕಂಪನಿಯ ೨೪ ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೆಚ್‌ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಲ್ಯಾಪ್ ಟಾಪ್, ಚಾರ್ಜರ್, ಮೌಸ್ ಗಳನ್ನು ಕಳ್ಳತನವಾಗಿದ್ದು ಈ ಸಂಬಂಧ ಪ್ರಕರಣವನ್ನು ಹೆಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೊಂಡು ಕಾರ್ಯಾಚರಣೆ ಕೈಗೊಂಡು ಆರೋಪಿ ಮಹಿಳೆಯನ್ನು ಬಂಧಿಸಿ ಸುದೀರ್ಘವಾಗಿ ವಿಚಾರಣೆ ಕೈಗೊಳ್ಳಲಾಗಿದೆ ಎಂದರು.
ವಶಪಡಿಸಿಕೊಂಡ ಮಹಿಳೆಯಿಂದ ಕೋರಮಂಗಲ,ಇಂದಿರಾನಗರ ತಲಾ ೧ ಹೆಚ್.ಎ.ಎಲ್ ಠಾಣೆಯ ೩ ಲ್ಯಾಪ್‌ಟಾಪ್ ಪ್ರಕರಣಗಳು ಪತ್ತೆಯಾಗಿವೆ.
ನಗರದಲ್ಲಿ ಮಾರಾಟ:
ಬಂಧಿತ ಮಹಿಳೆಯು ನಗರದ ಸಾಫ್ಟ್‌ವೇರ್ ಕಂಪನಿಗಳು ಮತ್ತು ಪಿಜಿ ಪ್ರದೇಶಗಳಾದ ಟಿನ್ ಪ್ಯಾಕ್ಟರಿ, ಮಾರತ್ತಹಳ್ಳಿ, ಬೆಳ್ಳಂದೂರು, ಸಿಲ್ಕ್ಬೋರ್ಡ್ ಹೆಬ್ಬಾಳ, ವೈಟ್ ಫೀಲ್ಡ್, ಮಹದೇವಪುರ, ಇನ್ನೂ ಮುಂತಾದ ಕಡೆಗಳಲ್ಲಿ ಹೋಟೆಲ್ ಮತ್ತು ಪಿಜಿಗಳಲ್ಲಿ ಒಂದು ವಾರ ಅಥವಾ ೧೬ ದಿನಗಳ ಕಾಲ ಉಳಿದುಕೊಂಡು ಪಿಜಿಗಳಲ್ಲಿ ಟೀ ಕುಡಿಯುವ ಮತ್ತು ಟಿಫನ್ /ಊಟ ಮಾಡುವ ಸಮಯದಲ್ಲಿ ಪಿಜಿಗಳಿಗೆ ಹೋಗಿ ಅಲ್ಲಿಂದ ಲ್ಯಾಪ್‌ಟಾಪ್ ಗಳನ್ನು ಕಳ್ಳತನ ಮಾಡಿಕೊಂಡು ಮಾರತ್ತಹಳ್ಳಿ, ಯಲಹಂಕ, ಹೆಬ್ಬಾಳದಲ್ಲಿ ಲ್ಯಾಪ್ ಟಾಪ್ ಅಂಗಡಿಗಳಿಗೆ ಮಾರಾಟ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.
ಆರೋಪಿಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಶಿವಕುಮಾರ್, ಮಾರ್ಗದರ್ಶನದಲ್ಲಿ ಹೆಚ್ ಎಎಲ್ ಪೊಲೀಸ್ ಇನ್ಸ್‌ಪಕ್ಟರ್ ಮತ್ತವರ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೂವರು ಮನೆಗಳ್ಳರು ಸೆರೆ:
ಮನೆಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸಿರುವ ವಿದ್ಯಾರಣ್ಯಪುರ ಪೊಲೀಸರು ೧೬.೬೦ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಘು(೨೩)ದೀಪಕ್ (೨೨)ಹಾಗೂ ಮಿಥುನ್(೨೩) ಬಂಧಿತ ಆರೋಪಿಗಳಾಗಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ದಯಾನಂದ್ ತಿಳಿಸಿದರು.
ವಿದ್ಯಾರಣ್ಯಪುರದ ಬಿಇಎಲ್ ಲೇಔಟ್‌ನಲ್ಲಿ ಕಳೆದ ಮಾ. ೧೩ರಂದು ಮನೆಯೊಂದರ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಪ್ರಕರಣ ದಾಖಲಿಸಿ ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳ ಸುದೀರ್ಘವಾಗಿ ವಿಚಾರಣೆಯಲ್ಲಿ ೧೨ ಲಕ್ಷ ಮೌಲ್ಯದ ೨೦೦ ಗ್ರಾಂ ಚಿನ್ನಾಭರಣ೧.೫ ಲಕ್ಷ ಮೌಲ್ಯದ ೨ ಕೆ.ಜಿ ತೂಕದ ಬೆಳ್ಳಿ ಪದಾರ್ಥಗಳು ಹಾಗೂ ೩ ಲಕ್ಷ ಮೌಲ್ಯದ ೩ ದ್ವಿಚಕ್ರ ವಾಹನಗಳು ಸೇರಿದಂತೆ ೧೬.೬೦ ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
೫ ಮನೆಗಳವು ಪತ್ತೆ:
ಆರೋಪಿಗಳ ಬಂಧನದಿಂದ ವಿದ್ಯಾರಣ್ಯಪುರ ೨ ಬಸವನಗುಡಿ ೧ ಕಳವು ಪ್ರಕರಣ, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ೧ ಕಳವು ಪ್ರಕರಣ, ಕೆಂಗೇರಿ ಪೊಲೀಸ್ ಠಾಣೆಯ ೧ ಕಳವು ಪ್ರಕರಣಗಳು ಪತ್ತೆಯಾಗಿದ್ದು ತನಿಖೆ ಮುಂದುವರೆದಿದೆ ಎಂದರು.
ಈ ಕಾರ್ಯಾಚರಣೆಯನ್ನು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ವಿದ್ಯಾರಣ್ಯಪುರ ಪೊಲೀಸ್ ಇನ್ಸ್‌ಪೆಕ್ಟರ್ ನರಸಿಂಹಮೂರ್ತಿ ಮತ್ತವರ ಸಿಬ್ಬಂದಿ ಕೈಗೊಂಡಿದ್ದಾರೆ ಎಂದರು.