ಲೌಕಿಕದಿಂದ ಆಧ್ಯಾತ್ಮಕದತ್ತ: ಸನ್ಯಾಸ ಧೀಕ್ಷೆ ಸ್ವೀಕರಿಸಿ ಜೈನ ಯುವತಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ19: ಜೀವನದಲ್ಲಿ ವೈರಾಗ್ಯ ಹೊಂದಿ ನಗರದ ಜೈನ ಸಮಾಜದ ಮುಮುಕ್ಷು ವಿಧಿ ಕುಮಾರಿ ಎಂಬ ಯುವತಿಯೊಬ್ಬರು ಜೈನ ಸನ್ಯಾಸ ಧೀಕ್ಷೆ ಸ್ವೀಕರಿಸಿ, ಸಾಧು ಜೀವನಕ್ಕೆ ಮುಖ ಮಾಡಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಧೀಕ್ಷಾ ಕಾರ್ಯಕ್ರಮ ಸಾನಿಧ್ಯ ವಹಿಸಿದ್ದ ಜೈನ ಮುನಿ ಆಚಾರ್ಯ ಭಗವಂತ ಶ್ರೀ ನರರತ್ನ ಸೂರೀಶ್ವರಜೀ ಮಹಾರಾಜರು, ಯುವತಿ ಮುಮುಕ್ಷು ವಿಧಿ ಕುಮಾರಿ ಅವರಿಗೆ ಜೈನ ಧರ್ಮದ ವಿಧಿವಿಧಾನಗಳಂತೆ ಸನ್ಯಾಸ ದೀಕ್ಷೆ ನೀಡಿದರು.
ಇದಕ್ಕೂ ಮೊದಲು ಶ್ವೇತ ವಸ್ತ್ರಗಳನ್ನು ಧರಿಸಿದ್ದ ಮುಮುಕ್ಷು ವಿಧಿ ಕುಮಾರಿ ಅವರನ್ನು ಜೈನ ಸನ್ಯಾಸಿಗಳು ಹಾಗೂ ಅವರ ಬಂಧು-ಮಿತ್ತರು ಶೋಭಾ ಯಾತ್ರೆ ಮೂಲಕ ವೇದಿಕೆಗೆ ಅದ್ಧೂರಿಯಾಗಿ ಕರೆ ತಂದು ಗೌರವಿಸಿದರು.
ಈ ವೇಳೆ ಮಹಾವೀರರ ಪ್ರತಿರೂಪವಾಗಿ ಪ್ರತಿಷ್ಠಪಿಸಿದ್ದ ಸ್ತಂಭಕ್ಕೆ ತಲೆ ಬಾಗಿ ನಮನಸ್ಕರಿಸಿದ ಮುಮುಕ್ಷು, ಬಳಿಕ ಶ್ರೀ ನರರತ್ನ ಸೂರೀಶ್ವರಜೀ ಮಹಾರಾಜರ ದರ್ಶನ ಪಡೆದು, ಸನ್ಯಾಸ ದೀಕ್ಷೆ ಸ್ವೀಕರಿಸಿದರು. ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಪ್ರಥಮವಾಗಿ ಜರುಗಿದ ಯುವತಿಯೊಬ್ಬರ ಸನ್ಯಾಸ ಧೀಕ್ಷ ಕಾರ್ಯಕ್ರಮಕ್ಕೆ ದೀಕ್ಷಾ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್.ಎಫ್ ಇಮಾಮ್ ನಿಯಾಜಿ ಮತ್ತು ಸಹಸ್ರಾರು ಜೈನ ಸಮಾಜ ಬಾಂಧವರು ಸಾಕ್ಷಿಯಾದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಜೈನ ಸಮುದಾಯದ ಭಕ್ತರು, ತಮ್ಮೆರೆಡು ಎರಡೂ ಕೈಗಳನ್ನು ಮೇಲೆತ್ತಿ ಹರ್ಷೋದ್ಘಾರ ಮಾಡುವ ಮೂಲಕ ಯುವತಿಗೆ ಬಿಳ್ಕೊಟ್ಟರು. ಬಳಿಕ ಅನೇಕರು ಸಾದ್ವಿಗೆ ನಮಿಸಿ, ಆಶೀರ್ವಾದ ಪಡೆದರು.
ನಗರದ ಉದ್ಯಮಿ ದಿವಂಗತ ಕಾಂತಿಲಾಲಾ ಜಿ ಜಿರವಲಾ ಮತ್ತು ರೇಖಾದೇವಿ ಜಿರವಲಾ ದಂಪತಿ ನಾಲ್ಕು ಜನ ಪುತ್ರಿಯರಲ್ಲಿ ಮೂರನೇ ಪುತ್ರಿ ಮುಮುಕ್ಷು ವಿಧಿ ಕುಮಾರಿ ಅವರು ತಮ್ಮ 17 ನೇ ವಯಸ್ಸಿನಲ್ಲಿ ವೈರಾಗ್ಯ ಹೊಂದಿ ಸನ್ಯಾಸ ಧೀಕ್ಷೆ ಪಡೆದಿದ್ದಾರೆ. ನಾಲ್ಕಾರು ತಿಂಗಳ ಹಿಂಸಡ ಹುಬ್ಬಳ್ಳಿಯಲ್ಲಿ ಜರುಗಿದ ಪ್ರವಚನ ಕಾರ್ಯಕ್ರಮದ ಭಾಗವಹಿಸಿದ್ದ ಮುಮುಕ್ಷು ವಿಧಿ ಕುಮಾರಿ ಅವರು ಲೌಕಿಕ ಬದುಕಿನಿಂದ ಆಧ್ಯಾತ್ಮಿಕ ಹಾದಿಯತ್ತ ಸಾಗಿದ್ದಾರೆ.